ದೇಶ

'ಸರ್ಜಿಕಲ್ ಸ್ಟ್ರೈಕ್'ನ್ನು ಜುಮ್ಲಾ ಸ್ಟ್ರೈಕ್ ಎನ್ನುವುದನ್ನು ನಿಲ್ಲಿಸಿ; ಕಾಂಗ್ರೆಸ್'ಗೆ ಪ್ರಧಾನಿ ಮೋದಿ

Manjula VN
ನವದೆಹಲಿ; ಸರ್ಜಿಕಲ್ ಸ್ಟ್ರೈಕ್'ನ್ನು ಜುಮ್ಲಾ ಸ್ಟ್ರೈಕ್ ಎಂದು ಹೇಳುವುದನ್ನು ಮೊದಲು ನಿಲ್ಲಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
ಅವಿಶ್ವಾಸ ನಿರ್ಣಯ ಕುರಿತಂತೆ ಕಾಂಗ್ರೆಸ್ ವಾಗ್ದಾಳಿಗೆ ಲೋಕಸಭೆಯಲ್ಲಿ ತಾವು ನೀಡಿದ್ದ ತಿರುಗೇಟುಗಳ ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿಯವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 
ಕಾಂಗ್ರೆಸ್ ನಾಯಕರು ನನ್ನ ವಿರುದ್ಧ, ನನ್ನ ಬಡತನ ವಿರುದ್ಧ, ನನ್ನ ಹಿನ್ನೆಲೆ ಕುರಿತಂತೆ ನಿಂದನೆ ಮಾಡಲಿ. ಆದರೆ, ಸೇನೆಯನ್ನು ಅಪಮಾನ ಮಾಡುವುದನ್ನು ನಿಲ್ಲಿಸಬೇಕು. ಸರ್ಜಿಕಲ್ ದಾಳಿಯನ್ನು ಜುಮ್ಲಾ ದಾಳಿ (ಸುಳ್ಳಿನ ದಾಳಿ) ಎಂದು ಹೇಳುವುದನ್ನು ಕಾಂಗ್ರೆಸ್ ಮೊದಲು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿದ್ದ 3ನೇ 2 ಭಾಗದಷ್ಟು ಜನರು ಎನ್'ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಸ್ಥಿರ ಸೃಷ್ಟಿ ಮಾಡುವಲ್ಲಿ ಕಾಂಗ್ರೆಸ್ ಎಷ್ಟರ ಮಟ್ಟಿಗೆ ಆಸಕ್ತಿ ತೋರುತ್ತಿದೆ ಎಂಬುದನ್ನು ನಿನ್ನೆ ಇಡೀ ದೇಶ ನೋಡಿದೆ. 1999ರಲ್ಲಿಗೂ ಕಾಂಗ್ರೆಸ್ ನಾಯಕರು ಇದನ್ನೇ ಮಾಡಿದ್ದರು, ಆಗಲೂ ಇದೇ ರೀತಿ ಆಗಿತ್ತು. ಲೋಕಸಭೆ ಹಾಗೂ ದೇಶದ 125 ಕೋಟಿ ಜನರ ಮೇಲೆ ಸರ್ಕಾರಕ್ಕೆ ನಂಬಿಕೆಯಿತ್ತು. ನಮಗೆ ಬೆಂಬಲ ನೀಡಿದ್ದ ಎಲ್ಲಾ ಪಕ್ಷಗಳಿಗೂ ಧನ್ಯವಾದಗಳನ್ನು ಹೇಳುತ್ತೇನೆ. ಭಾರತವನ್ನು ಬದಲಿಸುವ ಹಾಗೂ ಯುವಕರ ಕನಸನ್ನು ನನಸು ಮಾಡುವಲ್ಲಿ ನಮ್ಮ ಕಾರ್ಯಗಳು ಹೀಗೆಯೇ ಮುಂದುವರೆಯಲಿದೆ. ಜೈ ಹಿಂದ್ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ನಾಯಕರು ನಾನುಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅವರು ಹೇಳುತ್ತಿರುವುದು ಸರಿಯಾಗಿದೆ. ಅವರಿಗೆ ಹೋಲಿಕೆ ಮಾಡಿದರೆ, ನಾನು ಅತ್ಯಂತ ಸಣ್ಣ ಮನುಷ್ಯ. ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಲೋಕನಾಯಕ್ ಜೆಪಿ, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಜಿ, ಚಂದ್ರ ಶೇಖರ್ ಜೀ, ಪ್ರಣಬ್ ದಾ, ದೇವೇಗೌಡ ಜೀ ಮತ್ತು ಶರದ್ ಪವಾರ್ ಅವರನ್ನು ಒಂದು ಕುಟುಂಬ ಹೇಗೆ ನಡೆಸಿಕೊಂಡಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ.
ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ನಮ್ಮ ಹೋರಾಟ ಹೀಗೆಯೇ ಮುಂದುವರೆಯಲಿದೆ. ನಮ್ಮ ಈ ನಿರ್ಧಾರದಿಂದ ಅನೇಕರು ನನ್ನನ್ನು ದ್ವೇಷಿಸುತ್ತಿದ್ದಾರೆಂಬುದು ನನಗೆ ಗೊತ್ತಿದೆ. ಆದರೂ ಪರವಾಗಿಲ್ಲ, ಬಡವರಿಗೆ ಹಾಗೂ ದುರ್ಬಲರಿಗೆ ಸೇವೆ ಮಾಡಲು ನಾವಿಲ್ಲಿದ್ದೇವೆ ಎಂದು ತಿಳಿಸಿದ್ದಾರೆ. 
SCROLL FOR NEXT