ಬಿಹಾರ: ಸರ್ಕಾರಿ ಆಶ್ರಯ ತಾಣದಲ್ಲಿದ್ದ 21 ಬಾಲಕಿಯರ ಮೇಲೆ ಅತ್ಯಾಚಾರ, ಓರ್ವ ಬಾಲಕಿ ಹತ್ಯೆ
ಸರ್ಕಾರಿ ಆಶ್ರಯ ತಾಣದಲ್ಲಿದ್ದ 40 ಬಾಲಕಿಯರ ಪೈಕಿ 21 ಬಾಲಕಿಯರ ಮೇಲೆ ಅಲ್ಲಿನ ಸಿಬ್ಬಂದಿ, ಅದಿಕಾರಿಗಳು ಹಾಗೂ....
ಮುಜಾಫರ್ ಪುರ: ಸರ್ಕಾರಿ ಆಶ್ರಯ ತಾಣದಲ್ಲಿದ್ದ 40 ಬಾಲಕಿಯರ ಪೈಕಿ 21 ಬಾಲಕಿಯರ ಮೇಲೆ ಅಲ್ಲಿನ ಸಿಬ್ಬಂದಿ, ಅದಿಕಾರಿಗಳು ಹಾಗೂ ರಾಜಕಾರಣಿಗಳು ನಿರಂತರ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ.
ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದ್ದು, ಮೃತದೇಹ ಪತ್ತೆಗಾಗಿ ಪೊಲೀಸರು ಸೋಮವಾರ ಭೂಮಿ ಅಗೆದು ಶೋಧ ಕಾರ್ಯ ಆರಂಭಿಸಿದ್ದಾರೆ.
ಓರ್ವ ಬಾಲಕಿಯನ್ನು ಹತ್ಯೆ ಮಾಡಿ ಆಶ್ರಯ ತಾಣದ ಮುಂಭಾಗದಲ್ಲಿ ಹೂತು ಹಾಕಿದ್ದಾರೆ ಎಂಬ ಆರೋಪದ ಮೇರೆಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಜಾಫರ್ ನಗರ ಎಸ್ಎಸ್ ಪಿ ಹರ್ಪೀತ್ ಕೌರ್ ಅವರು ಹೇಳಿದ್ದಾರೆ.
ಸರ್ಕಾರಿ ಆಶ್ರಯ ತಾಣದಲ್ಲಿ ಒಟ್ಟು 40 ಬಾಲಕಿಯರು ವಾಸಿಸುತ್ತಿದ್ದು, ಈ ಪೈಕಿ ಅರ್ಧದಷ್ಟು ಬಾಲಕಿಯರ ಅತ್ಯಾಚಾರಕ್ಕೆ ಒಳಗಾಗಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಆಶ್ರಯ ತಾಣ(ಶೆಲ್ಟರ್ ಹೌಸ್)ದ ಸಿಬ್ಬಂದಿಯೊಂದಿಗೆ ಸಹಕರಿಸಲು ಹುಡುಗಿ ಒಪ್ಪದಿದ್ದಕ್ಕೆ ಆಕೆಯನ್ನು ಹತ್ಯೆಗೈಯಲಾಗಿದೆ ಎಂದು ಸ್ಥಳೀಯ ಹುಡುಗಿಯೊಬ್ಬಳು ಪೊಲೀಸರಿಗೆ ತಿಳಿಸಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಸೇರಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಸದ್ಯ ಶೆಲ್ಟರ್ ಹೌಸ್ ಗೆ ಬೀಗ ಜಡಿಯಲಾಗಿದೆ.