ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಬಗ್ಗೆ ಎನ್ ಡಿಎ ಮೈತ್ರಿಕೂಟ ತಲೆಕೆಡಿಸಿಕೊಂಡು ಕೂತಿದ್ದರೆ, ಇತ್ತ ಮಹಾಘಟಬಂಧನದ ತವರಾಗಿರುವ ಬಿಹಾರದಲ್ಲಿ ಮೋದಿಯನ್ನು ಸೋಲಿಸುವುದಕ್ಕೆ "ರೈನ್ ಬೋ ಸೂತ್ರ"ವನ್ನು ಹೆಣೆಯಲಾಗುತ್ತಿದೆ.
ವಿಪಕ್ಷಗಳ ನಡುವೆ ಒಮ್ಮತ ಕಾಯ್ದುಕೊಳ್ಳುವುದಕ್ಕಾಗಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಹಾರದ 40 ಸ್ಥಾನಗಳನ್ನು ಮಹಾಘಟಬಂಧನದ ಪಕ್ಷಗಳ ನಡುವೆ ಹಂಚಲು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ.
ಮಹಾಘಟಬಂಧನದ ಮೂಲಕ ಮೋದಿಯನ್ನು ಎದುರಿಸಲು ಆರ್ ಜೆಡಿ, ಕಾಂಗ್ರೆಸ್, ಎನ್ ಸಿಪಿ, ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ನೇತೃತ್ವದ ಹೆಚ್ಎಎಂ (ಹಿಂದೂಸ್ಥಾನ ಆವಾಮ್ ಮೋರ್ಚಾ) ಎಡರಂಗ, ಶರದ್ ಯಾದವ್ ನೇತೃತ್ವದ ಎಲ್ ಜೆಡಿ, ಕೇಂದ್ರ ಸಚಿವರಾಗಿರುವ ಉಪೇಂದ್ರ ಖುಶ್ವಾಹ ಅವರ ಆರ್ ಎಲ್ಎಸ್ ಪಿಯೂ ಸಹ ಮಹಾಘಟಬಂಧನದ ಭಾಗವಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ 7 ಪಕ್ಷಗಳು ಸೇರಿ ಹೆಣೆಯುತ್ತಿರುವ ಸೂತ್ರವನ್ನೇ ರೈನ್ ಬೋ ಮೈತ್ರಿ ಸೂತ್ರ ಎನ್ನಲಾಗುತ್ತಿದೆ.
ಮಾಧ್ಯಮಗಳ ಕಣ್ತಪ್ಪಿಸಿ ಮಹಾಘಟಬಂಧನದ ನಾಯಕರು ಚುನಾವಣಾ ರಣತಂತ್ರದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದು, ಸ್ಥಾನ ಹಂಚಿಕೆ, ತಳಮಟ್ಟದಿಂದ ಪಕ್ಷಗಳ ಸಂಘಟನೆ ಮಾಡುವುದು ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಚರ್ಚಿಸುತ್ತಿದ್ದಾರೆ.
ಇದೇ ವೇಳೆ ಜಿತನ್ ರಾಮ್ ಮಾಂಝಿ ಸಹ ಯುಪಿಎ ಮುಖ್ಯಸ್ಥರಾಗಿರುವ ಸೋನಿಯಾ ಗಾಂಧಿ ಅವರೊಂದಿಗೆ ಯಶಸ್ವಿ ಮಾತುಕತೆ ನಡೆಸಿದ್ದಾರೆ. ಸಧ್ಯಕ್ಕೆ ಮೋದಿ ಕ್ಯಾಬಿನೆಟ್ ನಲ್ಲೇ ಸಚಿವರಾಗಿರುವ ಉಪೇಂದ್ರ ಕುಶ್ವಾಹ ಅವರು ಮಹಾಘಟಬಂಧನದೊಂದಿಗೆ ಸೇರಲು ಆಸಕ್ತಿ ತೋರಿದಂತೆ ಕಾಣುತ್ತಿಲ್ಲವಾದರೂ, ಮುಂದಿನ ದಿನಗಳಲ್ಲಿ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಘಟಬಂಧನದ ಮೂಲಗಳಿಂದ ತಿಳಿದುಬಂದಿದೆ.
ಎಲ್ಲವೂ ಅಂದುಕೊಂಡಂತೆಯೇ ಆದರೆ ಒಟ್ಟು 40 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆ 10, ಆರ್ ಎಲ್ ಎಸ್ ಪಿ 4, ಎನ್ ಸಿಪಿ ಹಾಗೂ ಎಡರಂಗ ತಲಾ ಒಂದು ಸ್ಥಾನಗಳನ್ನು ಪಡೆಯಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.