ನವದೆಹಲಿ: 'ಕ್ರೂರ ನವ ಭಾರತ' ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು, ರಾಹುಲ್ 'ದ್ವೇಷದ ವ್ಯಾಪಾರಿ' ಎಂದು ಕರೆದಿದ್ದಾರೆ.
ಮಿಸ್ಟರ್ ರಾಹುಲ್ ಗಾಂಧಿಯವರೆ, ಪ್ರತಿ ಬಾರಿ ಅಪರಾಧ ನಡೆದಾಗ ಸಂತೋಷದಿಂದ ಜಿಗಿಯುವುದನ್ನು ನಿಲ್ಲಿಸಿ. ರಾಜಸ್ಥಾನ ಸರ್ಕಾರ ಈಗಾಗಲೇ ಸಾಮೂಹಿಕ ಹಿಂಸಾಚಾರದಲ್ಲಿ ತೊಡಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ. ಚುರುಕಿನ ತನಿಖೆಯನ್ನು ನಡೆಸುತ್ತಿದೆ. ಹಾಗಿದ್ದರೂ ನೀವು ಮೊಸಳೆ ಕಣ್ಣೀರು ಸುರಿಸಿ ಚುನಾವಣಾ ಲಾಭಕ್ಕಾಗಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದೀರಿ. ಸಾಕು ನಿಲ್ಲಿಸಿ. ನೀವು ಒಬ್ಬ ದ್ವೇಷದ ವ್ಯಾಪಾರಿ ಎಂದು ಗೋಯಲ್ ಅವರು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.
ಇನ್ನು ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಸಹ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಮೂಲಕ ರಣಹದ್ದು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಕುಟುಂಬ 1984ರ ಸಿಕ್ಖ ವಿರೋಧಿ ಹಿಂಸಾಚಾರ ಪ್ರಕರಣದ ನೇತೃತ್ವವನ್ನೇ ವಹಿಸಿತ್ತು. ಮಾತ್ರವಲ್ಲದೆ ಭಾಗಲ್ಪುರ ಮತ್ತು ನೆಲ್ಲೀ ಹಾಗೂ ಆ ಬಗೆಯ ಇತರ ಪ್ರಕರಣಗಳಲ್ಲಿ ಕೂಡ ಕಾಂಗ್ರೆಸ್ ಪಕ್ಷ ಹಿಂಸೆಯ ರೂವಾರಿಯಾಗಿತ್ತು. ರಾಹುಲ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಒಂದೇ ಒಂದು ಅವಕಾಶವನ್ನು ಕೂಡ ಬಿಟ್ಟುಕೊಡುತ್ತಿಲ್ಲ ಎಂದು ಇರಾನಿ ಟ್ವಿಟರ್ ನಲ್ಲಿ ಕಟುವಾಗಿ ಟೀಕಿಸಿದ್ದಾರೆ.
ರಾಜಸ್ಥಾನದ ಆಳ್ವಾರ್ ನಲ್ಲಿ ನಡೆದ ಸಾಮೂಹಿಕ ಹಲ್ಲೆ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಸಾಮೂಹಿಕ ಹಲ್ಲೆಗೀಡಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಪೊಲೀಸರು 3 ಗಂಟೆ ತೆಗೆದುಕೊಂಡಿದ್ದಾಕೆ. ಕೇವಲ 6 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಸೇರಿಸಲು ಅಷ್ಟು ಹೊತ್ತು ಬೇಕೇ? ವಾಹನದಲ್ಲಿದ್ದ ವ್ಯಕ್ತಿ ನೋವಿನಿಂದ ನರಳುತ್ತಿದ್ದರೆ ಮಾರ್ಗಮಧ್ಯೆ ಪೊಲೀಸರು ಟೀ ವಿರಾಮ ತೆಗೆದುಕೊಂಡಿದ್ದಾರೆ. ಈ ಮೋದಿಯ ಕ್ರೂರ ನವ ಭಾರತದಲ್ಲಿ ಮಾನವೀಯತೆಯ ಜಾಗದಲ್ಲಿ ದ್ವೇಷ ಸ್ಥಾನ ಪಡೆದಿದೆ. ಅಮಾಯಕರು ಈ ದ್ವೇಷಕ್ಕೆ ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದರು.