ದೇಶ

ಮಹಾರಾಷ್ಟ್ರ ಬಂದ್: ಹಿಂಸಾಚಾರದಿಂದ ಜನಜೀವನ ಅಸ್ತವ್ಯಸ್ತ, ಪ್ರತಿಭಟನೆ ಹಿಂಪಡೆದ ಮರಾಠರು

Manjula VN
ಮುಂಬೈ: ಮೀಸಲಾತಿ ಆಗ್ರಹಿಸಿ ಮಹಾರಾಷ್ಟ್ರದ ವಿವಿಧೆಡೆ ನಡೆಸುತ್ತಿರುವ ಬಂದ್ ಆಚರಣೆ ಹಿಂಸಾಚಾರಕ್ಕೆ ತಿರುಗಿದ್ದು, ಈ ನಡುವಲ್ಲೇ ಮರಾಠ ಕ್ರಾಂತಿ ಮೋರ್ಚಾ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ಬುಧವಾರ ತಿಳಿದುಬಂದಿದೆ. 
ಶಿಕ್ಷಣ ಹಾಗೂ ಕೆಲಸದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಮರಾಠಾ ಸಮುದಾಯ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡಿದೆ. 
ಮಹಾರಾಷ್ಟ್ರದ ವಿವಿಧೆಡೆ ಮರಾಠಾ ಸಮುದಾಯ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ಮೀಸಲಾತಿಗಾಗಿ ನೀಡುವಂತೆ ಆಗ್ರಹಿಸಿದೆ. ಮಹಾರಾಷ್ಟ್ರ ಸೇರಿ ಹಲವೆಡೆ ನಡೆಯುತ್ತಿರುವ ಬಂದ್ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ರಸ್ತೆಗಳಲ್ಲಿ ನಿಂತಿರುವ ವಾಹನಗಳಿಗೆ ಕೆಲ ಪ್ರತಿಭಟನಾಕಾರರು ಬೆಂಕಿ ಹಚ್ಚುತ್ತಿದ್ದಾರೆ.
ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಒಟ್ಟು 9 ಸಾರ್ವಜನಿಕ ಬಸ್ ಗಳ ಮೇಲೆ ದಾಳಿ ನಡೆಸಲಾಗಿದ್ದು, ಕಲ್ಲು ತೂರಾಟ ನಡೆಸಿದ್ದಾರೆಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. 
ಮುಂಬೈ, ಥಾಣೆ, ಪಲ್ಘಾರ್, ರಾಯ್ಗಢ ಮತ್ತು ಸತಾರಾ ಜಿಲ್ಲೆಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯನ್ನು ಗುಂಡು ಹಾರಿಸಿದ್ದಾರೆ. 
ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮರಾಟಾ ಸಮುದಾಯಗಳು ಮನವಿ ಮಾಡಿಕೊಳ್ಳುತ್ತಿದ್ದರೂ. ಇದರಿಂದ ಯಾವುದೇ ಪ್ರಯೋಜನಗಳಾಗಿಲ್ಲ. ಪ್ರತಿಭಟನೆಯ ಕಾವು ಇನ್ನು ಹೆಚ್ಚಾಗುವ ಲಕ್ಷಣಗಳು ಕಾಣುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಮರಾಠ ಕ್ರಾಂತಿ ಮೋರ್ಚಾ ಸಂಘಟನೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. 
SCROLL FOR NEXT