ದೇಶ

ದೆಹಲಿ: ಆಹಾರವಿಲ್ಲದೆ ಹಸಿವಿನಿಂದ ಮೂವರು ಮಕ್ಕಳು ಸಾವು

Manjula VN
ನವದೆಹಲಿ: ಆಹಾರವಿಲ್ಲದೆ ಹಸಿವಿನಿಂದ ಮೂವರು ಸಹೋದರಿಯರು ರಾಜಧಾನಿ ದೆಹಲಿಯಲ್ಲಿ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. 
ಮಾನ್ಸಿ (8), ಶಿಖಾ (4), ಪರುಲ್ (2) ಮೃತಪಟ್ಟ ಸಹೋದರಿಯರಾಗಿದ್ದಾರೆ. ಪೂರ್ವ ದೆಹಲಿಯ ಮಂಡವಾಲಿ ಕೊಳಗೇರಿಯಲ್ಲಿರುವ ಮನೆಯೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ. 
ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು, ಅಪೌಷ್ಟಿಕತೆ ಹಾಗೂ ಹಸಿವಿನಿಂದ ಸಾವನ್ನಪ್ಪಿದ್ದಾರೆಂದು ದೃಡಪಡಿಸಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಪಂಕಜ್ ಸಿಂಗ್ ಅವರು, ವೈದ್ಯಕೀಯ ಮಂಡಳಿ ಈಗಾಗಲೇ ತಂಡವೊಂದನ್ನು ರಚನೆ ಮಾಡಿದ್ದು, ಬಾಲಕಿಯರ ಸಾವಿಗೆ ನಿಜವಾದ ಕಾರಣವನ್ನು ಪತ್ತೆಹಚ್ಚಲು ಮರು ಮರಣೋತ್ತರ ಪರೀಕ್ಷೆ ನಡೆಸಲಿದೆ ಎಂದು ಹೇಳಿದ್ದಾರೆ. 
ಬಾಲಕಿಯರ ತಾಯಿ ಮಾನಸಿಕ ರೋಗದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಬಾಲಕಿಯರ ತಂದೆ ಮಂಗಲ್ ಕೆಲ ಅರಸಿಕೊಂಡು ಹೊರಗೆ ಹೋಗಿದ್ದು, 2 ದಿನಗಳಾದರೂ ಮನೆಗೆ ಹಿಂತಿರುಗಿಲ್ಲ ಎನ್ನಲಾಗುತ್ತಿದೆ. 
ಬಾಡಿಗೆ ಕಟ್ಟದ ಹಿನ್ನಲೆಯಲ್ಲಿ ಮನೆಯ ಮಾಲೀಕರು ಕುಟುಂಬವನ್ನು ಕೆಲ ದಿನಗಳ ಹಿಂದಷ್ಟೇ ಹೊರಗೆ ಹಾಕಿದ್ದರು. ನಂತರ ಕೆಲ ಸ್ಥಳೀಯರು ಇವರಿಗೆ ಸ್ಥಳ ನೀಡಿದ್ದರು. 
ಮಂಗಲ್ ಕೂಲಿ ಕಾರ್ಮಿಕನಾಗಿ ಕೆಲ ಮಾಡುತ್ತಿದ್ದ. ಸೈಕಲ್ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ. ಈ ಸೈಕಲ್ ರಿಕ್ಷಾವನ್ನು ಕೂಡ ಮನೆಯ ಮಾಲೀಕರೇ ನೀಡಿದ್ದರು. ಕೆಲ ದಿನಗಳ ಹಿಂದಷ್ಟೇ ದುಷ್ಕರ್ಮಿಗಳು ರಿಕ್ಷಾವನ್ನು ಕಳ್ಳತನ ಮಾಡಿದ್ದರು. ಮನೆಯ ಬಾಡಿಗೆಯನ್ನೂ ಕಟ್ಟದೆ, ಕಳೆದು ಹೋದ ಸೈಕಲ್ ರಿಕ್ಷಾದ ಹಣವನ್ನು ನೀಡದ ಕಾರಣ ಮಾಲೀಕರು ಮಂಗಲ್ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡು ಮನೆಯಿಂದ ಹೊರಗೆ ಹಾಕಿದ್ದರು. 
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. 
SCROLL FOR NEXT