ದೇಶ

ಹಸಿವಿನಿಂದ ಮಕ್ಕಳ ಸಾವು; ನಮ್ಮ ವ್ಯವಸ್ಥೆ ವಿಫಲವಾಗಿದೆ- ಆಪ್

Manjula VN
ನವದೆಹಲಿ: ಆಹಾರವಿಲ್ಲದೆ, ಹಸಿವಿನಿಂದ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ದೆಹಲಿಯ ಆಡಳಿತಾರೂಢ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿರುವ ನಿಂದನೆಗಳನ್ನು, ಆರೋಪಗಳನ್ನು ಒಪ್ಪಿಕೊಂಡಿರುವ ಆಮ್ ಆದ್ಮಿ ಸರ್ಕಾರ ನಮ್ಮ ವ್ಯವಸ್ಥೆ ವಿಫಲವಾಗಿದೆ ಎಂದು ಗುರುವಾರ ಹೇಳಿದೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ನಮ್ಮ ವ್ಯವಸ್ಥೆ ವಿಫವಾಗಿದೆ. ಪ್ರಕರಣ ಕುರಿತು ಐಸಿಡಿಎಸ್ (ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ) ಬಳಿ ವರದಿ ಕೇಳಲಾಗಿದೆ. ನಮ್ಮ ದಾಖಲೆಗಳಲ್ಲಿ ಸಂತ್ರಸ್ತ ಕುಟುಂಬದ ಹೆಸರು ಇರುವುದರ ಕುರಿತಂತೆ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ. ಒಂದು ವೇಳೆ ಹೆಸರು ಇದ್ದಿದ್ದೇ ಆದರೆ, ಅವರಿಗೇಕೆ ಸಹಾಯ ಮಾಡಲಿಲ್ಲ ಎಂಬ ಪ್ರಶ್ನೆ ಬರುತ್ತದೆ ಎಂದು ಹೇಳಿದ್ದಾರೆ. 
ಸಂತ್ರಸ್ತ ಕುಟುಂಬಕ್ಕೆ ಈಗಾಗಲೇ ರೂ.25 ಸಾವಿರ ಆರ್ಥಿಕ ನೆರವನ್ನು ನೀಡಲಾಗಿದೆ. ಮಕ್ಕಳ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆಗೆ ಉತ್ತಮ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಮಕ್ಕಳ ತಂದೆ ಮರಳಿದ ಬಳಿಕ ಇನ್ನಷ್ಟು ಆರ್ಥಿಕ ಸಹಾಯವನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತ್ಯೇಕ ತನಿಖೆಗಳಿಗೆ ಆದೇಶಿಸಲಾಗಿದೆ ಎಂದು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅರುಣ್ ಗುಪ್ತಾ ಅವರು ಹೇಳಿದ್ದಾರೆ. 
ಈ ನಡುವೆ ಪ್ರಕರಣ ಸಂಬಂಧ ಆಮ್ ಆದ್ಮಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರು ಹರಿಹಾಯ್ದಿದ್ದಾರೆ. ರಾಜಧಾನಿ ದೆಹಲಿಯಲ್ಲಿ ಪಡಿತರ ಹಗರಣ ನಡೆಯುತ್ತಿದ್ದು, ಸರ್ಕಾರ ನೀಡುತ್ತಿರುವ ನೆರವುಗಳು ಬಡವರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದ್ದಾರೆ. 
SCROLL FOR NEXT