ನವದೆಹಲಿ: ದೇಶದಲ್ಲಿ ಹೊಸ ಸಾಮಾಜಿಕ ಪಿಡುಗಾಗಿರುವ ಸಾಮೂಹಿಕ ಹಲ್ಲೆಯಂತಹ ಪ್ರಕರಣಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಹೊಸ ಕಾನೂನು ರಚನೆಗೆ ನಿರ್ಧಾರ ಕೈಗೊಂಡಿದೆ.
ಇತ್ತೀಚೆಗಿನ ರಾಜಸ್ಥಾನದ ಆಳ್ವಾರ್ ನಲ್ಲಿ ಗೋ ಸಂರಕ್ಷಣೆ ಹೆಸರಿನಲ್ಲಿ ನಡೆದಿದ್ದ ಸಾಮೂಹಿಕ ಹಲ್ಲೆ ಮತ್ತು ಸಾವಿನ ಪ್ರಕರಣ ಇನ್ನೂ ಚರ್ಚೆಯಾಗುತ್ತಿರುವಾಗಲೇ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ರಚನೆಗೆ ಮುಂದಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ಈ ಬಗ್ಗೆ ಕಾರ್ಯ ಪ್ರವೃತ್ತವಾಗಿರುವ ಕೇಂದ್ರ ಸರ್ಕಾರ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಸಮಿತಿಯಲ್ಲಿ ಖ್ಯಾತ ವಕೀಲ ಅನಾಸ್ ತನ್ವೀರ್, ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಇದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಈ ಸಮಿತಿ ತನ್ನ ಮೊದಲ ಸಭೆ ನಡೆಸಿದ್ದು, ಸಭೆಯಲ್ಲಿ ಸಾಮೂಹಿಕ ಹಲ್ಲೆ ಪ್ರಕರಣವನ್ನು ನಿಯಂತ್ರಿಸಲು ಕೈಗೊಳ್ಳಬಹುದಾದ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ.
ಇನ್ನು ಕಳೆದ ಸಂಸತ್ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇಂತಹ ಪ್ರಕರಣಗಳ ನಿಯಂತ್ರಣಕ್ಕೆ ಕಾನೂನು ತರುವ ಕುರಿತು ಕರಡು ರಚಿಸುವುದಾಗಿ ಸರ್ಕಾರ ಹೇಳಿತ್ತು,
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ತೆಹ್ಸೀನ್ ಪೂನಾವಾಲಾ ಅವರು, ಸಾಮೂಹಿಕ ಹಲ್ಲೆಯಂತ್ಹ ಪ್ರಕರಣಗಳ ನಿಯಂತ್ರಣಕ್ಕಾಗಿ ಹೊಸ ಕಾನೂನು ರಚನೆ ಮಾಡಲು ನಾವು ಮುಂದಾಗಿದ್ದು, ಶೀಘ್ರ ಕರಡು ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ಸಮಿತಿ ಶೀಘ್ರ ಹೊಸ ಕರಡನ್ನು ಸಂಸತ್ತಿಗೆ ಸಲ್ಲಿಕೆ ಮಾಡಲಿದ್ದು, ಸಾಮೂಹಿಕ ಹಲ್ಲೆಯಂಹ ಪ್ರಕರಣಗಳಲ್ಲಿ ಸಂತ್ರಸ್ಥರ ಸತ್ತಾಗ ಈ ಅಪರಾಧಗಳಲ್ಲಿ ತೊಡಗಿರುವವರಿಗೆ 5 ಲಕ್ಷ ದಂಡ, ಜೀವಾವಧಿ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಇಂತಹ ಪ್ರಕರಣಗಳನ್ನು ಜಾಮೀನು ರಹಿತ ಪ್ರಕರಣವಾಗಿ ಪರಿಗಣಿಸಲೂ ಕರಡಿನಲ್ಲಿ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಸಾಮೂಹಿಕ ಹಲ್ಲೆ ಪ್ರಕರಣಗಳ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಂದ ಕರ್ತವ್ಯಲೋಪ ಕಂಡುಬಂದರೆ ಕನಿಷ್ಛ 6 ತಿಂಗಳ ಅಮಾನತು, ಗಂಭೀರ ಲೋಪವಾಗಿದ್ದರೆ ಹುದ್ದೆಯಿಂದಲೇ ವಜಾಗೊಳಿಸಲೂ ಶಿಫಾರಸ್ಸು ಮಾಡಲಾಗಿದೆ. ಇದಲ್ಲದೆ ಗರಿಷ್ಠ 50 ಸಾವಿರ ದಂಡವಿಧಿಸುವ ಕುರಿತೂ ಚರ್ಚೆ ನಡೆಸಲಾಗಿದೆ.
ಇನ್ನು ಕರಡು ರಚನೆ ಪ್ರಕ್ರಿಯೆಲ್ಲಿ ಸಚಿವರ ನಿಯೋಗವೊಂದು ಚರ್ಚೆ ನಡೆಸಿ ಸಮಿತಿಗೆ ಸಲಹೆ ನೀಡಲಿದ್ದು, ಈ ಸಲಹೆಯನ್ನು ಆಧರಿಸಿ ಶಿಫಾರಸ್ಸುಗಲ ಬದಲಾವಣೆ ಅಥವಾ ಮಾರ್ಪಾಡು ಮಾಡಲಾಗುತ್ತದೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos