ಮುಂಬೈ: ಮೀಸಲಾತಿಗಾಗಿ ಹೋರಾಡಿದ್ದ ಪಟೇಲ್ ಸಮುದಾಯದ ಹೋರಾಟವನ್ನು ಹತ್ತಿಕ್ಕಿದಂತೆಯೇ ಮರಾಠಿಗರ ಹೋರಾಟವನ್ನೂ ಹತ್ತಿಕ್ಕಲೂ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
ಮರಾಠ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ ಶಿವಸೇನೆ, ಬಿಜೆಪಿ ಸರ್ಕಾರ ಎಂದಿಗೂ ತನ್ನವಿರುದ್ಧದ ಹೋರಾಟವನ್ನು ಸಹಿಸಿಕೊಳ್ಳುವುದಿಲ್ಲ. ಹೇಗಾದರೂ ಸರಿ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುತ್ತದೆ. ಈ ಹಿಂದೆ ಗುಜರಾತ್ ನಲ್ಲಿ ನಡೆದಿದ್ದ್ ಪಟೇಲರ ಮೀಸಲಾತಿ ಹೋರಾಟವನ್ನು ಹತ್ತಿಕ್ಕಿದ್ದಂತೆಯೇ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮರಾಠಿಗರ ಮೀಸಲಾತಿ ಹೋರಾಟವನ್ನೂ ಹತ್ತಿಕ್ಕಲು ಯತ್ನಿಸಿದೆ ಎಂದು ಶಿವಸೇನೆ ಹೇಳಿದೆ.
'ಕೇಂದ್ರ ಸರ್ಕಾರ ತನ್ನ ವಿರುದ್ಧ ಯಾವುದೇ ಚಳವಳಿ ಮತ್ತು ಹೋರಾಟವನ್ನು ಸಹಿಸಿಕೊಂಡಿಲ್ಲ. ಅದನ್ನು ಹೋರಾಟದ ಬೇಡಿಕೆಗಳನ್ನೂ ಈಡೇರಿಸದೇ, ಹೇಗಾದರೂ ಸರಿ ಅದನ್ನು ಹತ್ತಿಕ್ಕಲು ಯತ್ನಿಸುತ್ತದೆ. ಇದಕ್ಕೆ ಪಟೇಲರ ಮೀಸಲಾತಿ ಹೋರಾಟ ಉತ್ತಮ ನಿದರ್ಶನ. ಅದೇ ರೀತಿಯಲ್ಲೇ ಮರಾಠಿಗರ ಮೀಸಲಾತಿ ಹೋರಾಟವನ್ನೂ ಹತ್ತಿಕ್ಕಲು ಕೇಂದ್ರ ಸರ್ಕಾರ ಹವಣಿಸುತ್ತಿದೆ ಎಂದು ಹೇಳಿದೆ.
ಅಂತೆಯೇ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನಿವಿಸ್ ಅವರ ವಿರುದ್ಧವೂ ಪರೋಕ್ಷ ಕಿಡಿಕಾರಿರುವ ಶಿವಸೇನೆ, ಕೇಂದ್ರ ಸಚಿವರಾಗಿರುವ ಪಂಕಜಾ ಮುಂಡೆ ಅವರು ಒಂದೇ ಒಂದು ದಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮರಾಠಿಗರ ಸಮಸ್ಯೆ ಆಲಿಸಲಿ. ಆಗ ಖಂಡಿತಾ ಅವರೇ ಮೀಸಲಾತಿ ಹೋರಾಟದ ಬೇಡಿಕೆಗಳನ್ನು ಖಂಡಿತಾ ಈಡೇರಿಸುತ್ತಾರೆ. ಅಷ್ಟರ ಮಟ್ಟಿಗೆ ಮರಾಠಿಗರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದೆ.
ಅಂತೆಯೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ತನ್ನ ಅಸಮಾಧಾನ ವ್ಯಕ್ತಪಡಿಸಿರುವ ಶಿವಸೇನೆ, ಇಲ್ಲಿ ಮಹಾರಾಷ್ಟ್ರದಲ್ಲಿ ಮರಾಠಿಗರು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದರೆ ಅತ್ತ ಪ್ರಧಾನಿ ನರೇಂದ್ರ ಮೋದಿ ವಿದೇಶ ಸುತ್ತುತ್ತಿದ್ದಾರೆ. ಸಿಎಂ ಫಡ್ನವಿಸ್ ಅವರೇ ತುರ್ತಾಗಿ ಪ್ರಧಾನಿಗಳನ್ನು ಭೇಟಿಯಾಗಬೇಕು ಎಂದರೆ ಅವರು ಯಾರನ್ನು ಬೇಟಿ ಮಾಡಿ ಚರ್ಚಿಸಬೇಕು. ಪ್ರಧಾನಿ ಮೋದಿಗೆ ದೇಶವಾಸಿಗಳ ಸಮಸ್ಯೆ ಆಲಿಸುವುದಕ್ಕಿಂತ ವಿದೇಶ ಸುತ್ತುವುದೇ ಮುಖ್ಯವಾಗಿದೆ ಎಂದು ಹೇಳಿದೆ.