ದೇಶ

ಖಾಸಗಿ ವೈದ್ಯರ ಮುಷ್ಕರ: ಅಗತ್ಯ ಬಿದ್ದರೆ 'ಎಸ್ಮಾ' ಜಾರಿಗೊಳಿಸಿ; ರಾಜ್ಯ ಸರ್ಕಾರಗಳಿಗೆ ಕೇಂದ್ರ

Manjula VN
ನವದೆಹಲಿ: ಭಾರತೀಯ ವೈದ್ಯಕೀಯ ಪರಿಷತ್'ನ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ವೈದ್ಯರು ದೇಶದಾದ್ಯಂತ ಹೊರ ರೋಗಿ ಸೇವೆ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಬಿದ್ದರೆ ಎಸ್ಮಾ ಜಾರಿ ಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚನೆ ನೀಡಿದೆ. 
ಖಾಸಗಿ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಆಡಳಿತ ನಿರ್ದೇಶಕ ಮನೋಜ್ ಝಲಾನಿಯವರು, ಮುಷ್ಕರದಲ್ಲಿ ಬಹುತೇಕ ವೈದ್ಯಕೀಯ ತಜ್ಞರು, ವೈದ್ಯರು ಭಾಗಿಯಾಗುವ ಸಾಧ್ಯತೆಗಳಿದ್ದು, ಇದರಿಂತ ರೋಗಿಗಳಿಗೆ ಸಮಸ್ಯೆಗಳುಂಟಾಗಿದ್ದೇ ಆದರೆ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 
ಪ್ರತಿಭಟನೆಗಳ ನಡುವೆಯೂ ತುರ್ತು ಸೇವೆಗಳು ಎಂದಿನಂತೆ ಮುಂದುವರೆಯಲಿವೆ. ಮುಷ್ಕರ ಹಿನ್ನಲೆಯಲ್ಲಿ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯಬಿದ್ದರೆ, ಎಸ್ಮಾ ಜಾರಿ ಗೊಳಿಸಲಾಗುತ್ತದೆ. ಮುಷ್ಕರಗಳು ಮುಂದುವರೆದಿದ್ದೇ ಆದರೆ, ಕೈಗೊಳ್ಳಲಾಗಿರುವ ಅಗತ್ಯ ಕ್ರಮಗಳೂ ಕೂಡ ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ. 
ಕೇಂದ್ರ ಸರ್ಕಾರವು ಭಾರತೀಯ ವೈದ್ಯಕೀಯ ಪರಿಷತ್ ಕಾಯ್ದೆಗೆ ಕೆಲ ತಿದ್ದುಪಡಿ ತರಲು 2016ರಲ್ಲಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿತ್ತು. ಈ ವೇಳೆ ಅವೈಜ್ಞಾನಿಕವಾಗಿ ತಿದ್ದುಪಡಿ ಮಾಡಲಾಗುತ್ತಿದ್ದು, ತಿದ್ದುಪಡಿಯಿಂದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಮರೀಚಿಕೆಯಾಗಲಿದೆ. 
ವೈದ್ಯಕೀಯ ಶಿಕ್ಷಣದಲ್ಲಿ ರಾಜ್ಯಗಳು ಅಧಿಕಾರ ಕಳೆದುಕೊಳ್ಳಲಿವೆ. ಹೀಗಾಗಿ ಮರುಪರಿಶೀಲಿಸುವಂತೆ ಭಾರತೀಯ ವೈದ್ಯಕೀಯ ಸಂಘ ಒತ್ತಾಯಿಸಿತ್ತು. ಆದರೂ, ಯಾವುದೇ ಪರಿಷ್ಕರಣೆ ಇಲ್ಲದೇ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಿದೆ. ಹೀಗಾಗಿ ಐಎಂಎ ದೇಶದಾದ್ಯಂತ ಇಂದು ಒಂದು ದಿನ ಹೊರ ರೋಗಿಗಳ ಸೇವೆ ಬಂದ್ ಮಾಡುವಂತೆ ಕರೆ ನೀಡಿದೆ. 
SCROLL FOR NEXT