ವಿದ್ಯಾರ್ಥಿಗಳ ಎಳೆದಾಡಿದ ಪೊಲೀಸರು
ಅಲಹಾಬಾದ್: ರ‍್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶಕ್ಕೆ ತೆರಳಿದ್ದ ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಇಬ್ಬರು ಯುವತಿಯರಿಗೆ ಪೊಲೀಸರು ಮನಬಂದಂತೆ ಥಳಿಸಿದ್ದಾರೆ.
ಅಲಹಾಬಾದ್ ನಲ್ಲಿ ಆಯೋಜನೆಯಾಗಿದ್ದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ತೆರಳುತ್ತಿದ್ದ ವೇಳೆ, ರಸ್ತೆ ಮಧ್ಯೆ ಕಪ್ಪು ಪಟ್ಟಿ ಪ್ರದರ್ಶಿಸಿ, ಸರ್ಕಾರದ ವಿರುದ್ಧ ಮತ್ತು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಈ ವೇಳೆ ಯುವತಿಯರನ್ನು ವಶಕ್ಕೆ ಪಡೆಯಲೆತ್ನಿಸಿದ ಪೊಲೀಸರು ಇಬ್ಬರು ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ. ಅಂತೆಯೇ ಪುರುಷ ಪೊಲೀಸರು ಲಾಟಿಯಿಂದ ಥಳಿಸಿ ಕೂದಲು ಹಿಡಿದ ಎಳೆದಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ತಕ್ಷಣ ಅಲ್ಲಿ ಭದ್ರತೆಗಿದ್ದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹೀಗೆ ಬಂದಿಸುವಾಗ ಇಬ್ಬರು ಮಹಿಳೆಯರನ್ನು ಮಹಿಳಾ ಪೊಲೀಸರೇ ಬಂಧಿಸಬೇಕು ಎನ್ನುವ ನಿಯಮ ಪಾಲನೆಯಾಗಿಲ್ಲ. ಅಲ್ಲದೇ, ಓರ್ವ ಯುವತಿಗೆ ಪೊಲೀಸ್ ಪೇದೆಯೊಬ್ಬ ಲಾಠಿಯಿಂದ ಥಳಿಸುತ್ತಾನೆ. ಮತ್ತೊಬ್ಬ ಜಡೆ ಹಿಡಿದು ಅವರನ್ನು ಜೀಪ್ ನೊಳಗೆ ದಬ್ಬುತ್ತಾನೆ. ಕೆಲವೇ ನಿಮಿಷದಲ್ಲಿ ನಡೆಯುವ ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ.
ಇನ್ನು ಯುವತಿಯರನ್ನು ಜೀಪ್ ನೊಳಗೆ ತಳ್ಳುವಾಗ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಹೊಡೆಯಬೇಡಿ ಎಂದು ಕೂಗಿ ಹೇಳಿದರೂ ಯುವತಿಯನ್ನು ಜಡೆ ಹಿಡಿದು ಎಳೆದಾಡಿದ ಸಿಬ್ಬಂದಿಯ ಕ್ರಮವನ್ನ ಟೀಕಿಸಲಾಗುತ್ತಿದೆ.
ಬಂಧಿತರು ಸಮಾಜವಾದಿ ಪಕ್ಷದ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು
ಇನ್ನು ಪೊಲೀಸ್ ವಿಚಾರಣೆ ನಂತರ ಆ ಮೂವರು ಸಮಾಜವಾದಿ ಪಾರ್ಟಿಯ ವಿದ್ಯಾರ್ಥಿ ಸಂಘಟನೆಯಾದ ಸಮಾಜವಾದಿ ಛಾತ್ರ ಸಭಾದ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಬಂಧಿತ ವಿದ್ಯಾರ್ಥಿನಿಯರು 25 ವರ್ಷದ ನೇಹಾ ಯಾದವ್ ಹಾಗೂ 24 ವರ್ಷದ ರಮಾ ಯಾದವ್ ಎಂದು ಹೇಳಲಾಗಿದ್ದು, ಇವರು ಅಲಹಾಬಾದ್ ಯ್ಯೂನಿವರ್ಸಿಟಿಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.