ದೇಶ

ರಾಮಾಯಣ ಕಾಲದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು: ಉತ್ತರ ಪ್ರದೇಶ ಉಪಮುಖ್ಯಮಂತ್ರಿ

Srinivas Rao BV
ಲಖನೌ: ಮಹಾಭಾರತದ ಕಾಲದಲ್ಲೇ ಇಂಟರ್ ನೆಟ್ ಇತ್ತು ಎಂದು ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಹೇಳಿಕೆ ನೀಡಿದ್ದ ಬೆನ್ನಲ್ಲೆ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ, ರಾಮಾಯಣ ಕಾಲದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಅರ್ಥಾತ್ ಪ್ರಣಾಳ ಶಿಶು ಪರಿಕಲ್ಪನೆ ಇತ್ತು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. 
ಸೀತೆಯನ್ನು ಉದಾಹರಣೆಯಾಗಿಟ್ಟುಕೊಂಡು ದಿನೆಶ್ ಶರ್ಮಾ ಈ ಹೇಳಿಕೆ ನೀಡಿದ್ದು, ಪ್ರಣಾಳ ಶಿಶು ರಾಮಾಯಣ ಕಾಲದಲ್ಲೇ ಇತ್ತು. ಸೀತೆ ಭೂಮಿ (ಮಡಿಕೆ)ಯಲ್ಲಿ ಹುಟ್ಟಿದಳು ಎಂದು ಹೇಳುತ್ತಾರೆ. ಇದು ಇಂದಿನ ಪ್ರಣಾಳ ಶಿಶು ಮಾದರಿಯ ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು ಎಂಬುದನ್ನು ಪುಷ್ಟೀಕರಿಸುತ್ತದೆ ಎಂದಿದ್ದಾರೆ. 
ಇನ್ನು ತ್ರಿಪುರಾ ಸಿಎಂ ಹೇಳಿದಂತೆಯೇ ಮಹಾಭಾರತದ ಅವಧಿಯಲ್ಲಿ ಇಂಟರ್ ನೆಟ್ ಸಂಪರ್ಕ ಇತ್ತು ಎಂದು ಹೇಳಿರುವ ದಿನೇಶ್ ಶರ್ಮಾ, ಇಂದು ಟಿವಿಗಳಲ್ಲಿ ನೇರ ಪ್ರಸಾರ ಬರುತ್ತಿದೆ. ಆದರೆ ಇಂಥಹದ್ದೇ  ತಂತ್ರಜ್ಞಾನ ಮಹಾಭಾರತದ ಅವಧಿಯಲ್ಲೂ ಇತ್ತು, ಸಂಜಯ ಮಹಾಭಾರತದ ಯುದ್ಧದ ವರದಿಗಳನ್ನು ದೃತರಾಷ್ಟ್ರನಿಗೆ ಹೇಳುತ್ತಿದ್ದದ್ದು ಇಂತಹ ತಂತ್ರಜ್ಞಾನದ ಮೂಲಕವೇ ಎಂದು ದಿನೇಶ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. 
ಹಿಂದಿ ಪತ್ರಿಕೋದ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ದಿನೇಶ್ ಶರ್ಮಾ ಮಾತನಾಡುತ್ತಿದ್ದರು. ಈ ಹಿಂದೆ ನಾರದ ಮುನಿಯನ್ನು ಗೂಗಲ್ ಇಂಜಿನ್ ಗೆ ಹೋಲಿಕೆ ಮಾಡಿದ್ದ ದಿನೇಶ್ ಶರ್ಮಾ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. 
SCROLL FOR NEXT