ಭದ್ರತಾ ಪಡೆಗಳ ವಾಹನ ಹರಿದು ಯುವಕ ಸಾವು ಪ್ರಕರಣ: ಸಿಆರ್'ಪಿಎಫ್ ವಿರುದ್ಧ ಎಫ್ಐಆರ್ ದಾಖಲು
ಶ್ರೀನಗರ: ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಶುಕ್ರವಾರ ಭಾರಿ ಪ್ರಮಾಣದ ಹಿಂಸಾಚಾರ ಸಂಭವಿಸಿ, ಭದ್ರತಾ ಪಡೆಗಳ ವಾಹನಕ್ಕೆ ಸಿಲುಕಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್'ಪಿಎಫ್ ಪಡೆಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಶ್ರೀನಗರದ ಸಿಆರ್'ಪಿಎಫ್ ಘಟಕದ ವಿರುದ್ಧ ಪೊಲೀಸರು 2 ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಸೇನಾ ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279 (ರ್ಯಾಶ್ ಡ್ರೈವಿಂಗ್) 337 ಆರ್'ಪಿಸಿ ಪ್ರಕರಣ ಹಾಗೂ ಕಲ್ಲು ತೂರಾಟ ನಡೆಸುತ್ತಿದ್ದ ಅನಾಮಧೇಯ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) 148 (ಗಲಭೆ) 149, 152, 336 ಮತ್ತು 427 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಶ್ರೀನಗರದಲ್ಲಿ ಶುಕ್ರವಾರ ಪ್ರಾರ್ಥನೆ ಮುಗಿಸಿ ಹೊರಬಂದ ಗುಂಪೊಂದು ಸಿಆರ್'ಪಿಎಫ್ ಯೋಧರ ಮೇಲೆ ಭಾರೀ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿತ್ತು. ಏಕಾಏಕಿ ನಾರಾರು ಸಂಖ್ಯೆಯಲ್ಲಿದ್ದ ಜನ ಯೋಧರ ಮೇಲೆ ಕಲ್ಲು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ತೂರಿದ್ದಾರೆ. ಅಲ್ಲದೆ, ಕೆಲ ಯುವಕರು ಸೇನಾ ವಾಹನದ ಮೇಲೆ ಹತ್ತಿ, ವಾಹನದ ಒಳಗಿನಿಂದ ಯೋಧರ ಹೊರಗೆಳೆದುಅವರನ್ನು ಹತ್ಯೆಗೈಯುವ ಯತ್ನ ಮಾಡಿದ್ದರು.
ಈ ವೇಳೆ ಜೀವ ರಕ್ಷಣೆಗಾಗಿ ಯೋಧರು, ವಾಹನವನ್ನು ವೇಗವಾಗಿ ಓಡಿಸಿದ್ದಾರೆ. ಈ ವೇಳೆ ಹಲವರು ಸೇನಾ ವಾಹನದ ಕೆಳಗೆ ಸಿಕ್ಕು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಮತ್ತಷ್ಟು ಆಕ್ರೋಶಗೊಂಡ ಗುಂಪು, ಕಂಡಕಂಡ ಸೇನಾ ವಾಹನಗಳ ಮೇಲೆ, ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಭದ್ರತಾ ಪಡೆಗಳ ವಾಹನಗಳ ಕೆಳಗೆ ಸಿಕ್ಕು ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಮೂವರ ಪೈಕಿ ಇದೀಗ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಈ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.