ದೇಶ

2006ರ ಕಾಶ್ಮೀರ ಲೈಂಗಿಕ ಹಗರಣ: ಐವರಿಗೆ 10 ವರ್ಷ ಜೈಲು

Raghavendra Adiga
ಚಂಡೀಘರ: 2006 ರ ಜಮ್ಮು ಮತ್ತು ಕಾಶ್ಮೀರ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಬಿಎಸ್ ಡೆಪ್ಯುಟಿ ಇನ್ಸ್ ಪೆಕ್ಟರ್ ಸೇರಿದಂತೆ ಐವರಿಗೆ  10 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
ಚಂಡಿಘರದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಗಗನ್ ಜಿತ್ ಕೌರ್ ಈ ತೀರ್ಪು ಪ್ರಕಟಿಸಿದ್ದಾರೆ. 
ಮಾಜಿ ಬಿಎಸ್ ಎಫ್ ಡೆಪ್ಯುಟಿ ಇನ್ಸ್ ಪೆಕ್ಟರ್ ಕೆಸಿ ಪಂಡಿ, ಜಮ್ಮು ಕಾಶ್ಮೀರದ ಮಾಜಿ ಉಪ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಅಶ್ರಫ್ ಮಿರ್ ಹಾಗೂ ಮೂವರು ಇತರರು ಶಿಕ್ಷೆಗೆ ಗುರಿಯಾಗಿದ್ದಾರೆ. ಪಂಡಿ ಹಾಗೂ ಅಶ್ರಫ್ ಮಿರ್ ಅವರುಗಳಿಗೆ ಶಿಕ್ಷೆ ಜತೆಗೆ ತಲಾ 1 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
ದಂಡ ಕಟ್ಟಲು ವಿಫಲವಾದಲ್ಲಿ ಅವರು ಮತ್ತೆ ಒಂದು ವರ್ಷಗಳ ಹೆಚ್ಚುವರಿ ಜೈಲು ವಾಸ ಶಿಕ್ಷೆಗೆ ಒಳಗಾಗಬೇಕಾಗುವುದು. ಇತರೆ ಮೂವರೂ ಸಹ 50,000 ರೂ. ದಂಡ ಪಾವತಿ ಮಾಡಬೇಕಿದ್ದು ಅವರು ದಂಡ ಕಟ್ಟಿಲ್ಲವಾದರೆ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಹೇಳಿದೆ.
ಕಳೆದ ಮೇ 30 ರಂದು ನ್ಯಾಯಾಲಯವು ಪ್ರಕರಣದಲ್ಲಿ ಭಾಗವಹಿಸಿದ್ದ ಈ ಐವರನ್ನು ದೋಷಿಗಳೆಂದು ಗುರುತಿಸಿತ್ತು. ಇದೇ ವೇಳೆ ಜಮ್ಮು ಕಾಶ್ಮೀರದ ಅಂದಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸೇರಿದಂತೆ ಇಬ್ಬರು ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿತು.
ಅಪ್ರಾಪ್ತ ಕಾಶ್ಮೀರಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದೃಶ್ಯವನ್ನೊಳಗೊಂಡ ಎರಡು ಸಿಡಿಗಳನ್ನು 2006ರಲ್ಲಿ ಕಾಶ್ಮೀರದ ಪೋಲೀಸರು ವಶಕ್ಕೆ ಪಡೆದಾಗ ಬೃಹತ್ ಲೈಂಗಿಕ ಹಗರಣ ಬಯಲಾಗಿತ್ತು. ಅಪ್ರಾಪ್ತ ಯುವತಿಯರನ್ನು ಪೋಲೀಸ್ ಅಧಿಕಾರಿಗಳು, ರಾಜತಾಂತ್ರಿಕರು, ರಾಜಕಾರಣಿಗಳು ಸೇರಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿರುವ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು.
SCROLL FOR NEXT