ಆಪರೇಷನ್ ಬ್ಲೂ ಸ್ಟಾರ್'ಗೆ 34 ವರ್ಷ: ಸ್ವರ್ಣಮಂದಿರದ ಬಳಿ ಖಾಲಿಸ್ಥಾನ್ ಜಿಂದಾಬಾದ್ ಘೋಷಣೆ
ಅಮೃತಸರ: ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ 34ನೇ ಸ್ಮರಣ ವರ್ಷಾಚರಣೆ ಪ್ರಯುಕ್ತ ಸ್ವರ್ಣ ಮಂದಿರದ ಬಳಿ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಅಖಿಲ ಭಾರತ ಸಿಖ್ ವಿದ್ಯಾರ್ಥಿಗಳ ಒಕ್ಕೂಟ (ಎಐಎಸ್ಎಸ್ಎಫ್) 'ಖಾಲಿಸ್ಥಾನ್ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಇಂದು ಬೆಳಿಗ್ಗೆ ಸ್ವರ್ಣ ಮಂದಿರದ ಬಳಿ ಬಂದ ಸಿಖ್ ವಿದ್ಯಾರ್ಥಿಗಳು ಖಾಲಿಸ್ಥಾನ್ ಪರ ಘೋಷಣೆಗಳನ್ನು ಕೂಗಿದ್ದು, ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿದ್ದಾರೆಂದು ವರದಿಗಳು ತಿಳಿಸಿದ್ದಾರೆ.
ಸಿಖ್ ವಿದ್ಯಾರ್ಥಿಗಲ ಈ ವರ್ತನೆಗೆ ಅಕಲ್ ತಖ್ತ್ ಜಿತೇಂದರ್ ಗಿಯಾನಿ ಗುರ್'ಬಚ್ಚನ್ ಸಿಂಗ್ ಅವರು ಖಂಡನೆ ವ್ಯಕ್ತಪಡಿಸಿದ್ದು, ಇಂತಹ ಘೋಷಣೆಗಳನ್ನು ಖಂಡಿಸುತ್ತೇನೆ. ಗುರ್ಬಾನಿ ಹಾಡುತ್ತಿದ್ದ ಸಂದರ್ಭದಲ್ಲಿ ಸ್ವರ್ಣಮಂದಿರದ ಬಳಿ ಈ ರೀತಿಯ ಘೋಷಣೆಗಳು ಸರಿಯಲ್ಲ ಎಂದು ಹೇಳಿದ್ದಾರೆ.
ಸಿಕ್ಖ್ ಧರ್ಮದ ಐದು ಅತ್ಯಂತ ಪ್ರಮುಖ ಪವಿತ್ರ ತಾಣಗಳಲ್ಲಿ ಸ್ವರ್ಣ ಮಂದಿರ ಕೂಡ ಒಂದಾಗಿದ್ದು, ಇಂತಹ ಪವಿತ್ರ ತಾಣಕ್ಕೆ ನೂರಾರು ಸಂಖ್ಯೆಯಲ್ಲಿ ಬಂದಿರುವ ಸಿಕ್ಖರು ಖಾಲಿಸ್ಥಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
ಪ್ರತ್ಯೇಕ ಖಾಲಿಸ್ಥಾನ ರಾಷ್ಟ್ರಕ್ಕಾಗಿ ವಿಧ್ವಂಸಕ ಮಾರ್ಗ ಹಿಡಿದಿದ್ದ ಬಂಡುಕೋರರ ನಾಯಕ ಭಿಂದ್ರನ್ ವಾಲೆ, ಸಿಕ್ಖರ ಪವಿತ್ರ ಕ್ಷೇತ್ರ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ಆಶ್ರಯ ತಾಣವಾಗಿಸಿಕೊಂಡಿದ್ದ. ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಬಂಡುಕೋರರರನ್ನು ಹೊರದಬ್ಬಲು ಸೇನೆ ಹೆಣೆದಿದ್ದೇ ಈ ಆಪರೇಷನ್ ಬ್ಲೂ ಸ್ಟಾರ್.
ಈ ಸೇನಾ ಕಾರ್ಯಾಚರಣೆ ಬಗ್ಗೆ ಅನೇಕ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದಿಗೂ ವಿವಾದಾಸ್ಪದ ಸೇನಾ ಕಾರ್ಯಾಚರಣೆಗಾಗಿ ಆಪರೇಷನ್ ಬ್ಲೂ ಸ್ಟಾರ್ ಗುರ್ತಿಸಿಕೊಂಡಿದೆ.
ಪಾಕಿಸ್ತಾನದ ಕುಮ್ಮಕ್ಕಿನಿಂದ ದೇಶದ ಸಾರ್ವಭೌಮತ್ವಕ್ಕೆ ಸವಾಲಾಗಿದ್ದ ಭಿಂದ್ರನ್ ವಾಲೆಯನ್ನು ಹಿಮ್ಮೆಟ್ಟಿಸುವುದು ಸರ್ಕಾರಕ್ಕೆ ಆಗಿನ ತುರ್ತು ಅಗತ್ಯವಾಗಿತ್ತು. ಅದರ ಫಲವಾಗಿಯೇ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ಭಾರತ ಕಂಡ ಅತ್ಯಂತ ದಕ್ಷ ಹಾಗೂ ಪ್ರಭಾವಶಾಲಿ ಪ್ರಧಾನಿಯಾದ ಇಂದಿರಾಗಾಂಧಿಯವರು ಇಂಥಹದ್ದೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರು. ಪರ-ವಿರೋಧದ ಮಾತುಗಳಿಗೆ ಕಿವಿಗೊಡದೆ ಭಿಂದ್ರನ್ ವಾಲೆಯನ್ನು ಮಟ್ಟ ಹಾಕಲು ಸೇನೆಗೆ ಸೂಚನೆ ನೀಡಿದ್ದರು. ಇದರಂತೆ ಸ್ವರ್ಣ ಮಂದಿರಕ್ಕೆ ನುಗ್ಗಿದ್ದ ಸೈನಿಕರು ಸಿಕ್ಕ ಉಗ್ರರನ್ನು ಮುಗಿಸಿ ಬಿಡುವ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದರು.
ಇದಾದ ಬಳಿಕ ಆಂದಿನಿಂದ ಇಂದಿನ ವರೆಗೂ ಪ್ರತೀ ವರ್ಷ ಈ ದಿನದಂದು ಸಿಕ್ಖರು 'ಆಪರೇಶನ್ ಬ್ಲ್ಯೂ ಸ್ಟಾರ್ ಸ್ಮರಣ' ವರ್ಷಾಚರಣೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.