ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳ ವಿರುದ್ಧ ದಾಖಲಾಗಿರುವ ಎಲ್ಲಾ ಕಲ್ಲು ತೂರಾಟ ಪ್ರಕರಣಗಳನ್ನು ಕೈಬಿಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕ್ರೀಡಾ ಸಮಾವೇಶ ಸಮಾರಂಭದಲ್ಲಿ ಮಾತನಾಡಿರುವ ಅವರು, ದೆಹಲಿಯಲ್ಲಿದ್ದಾಗ ನಾನು ಕಾಶ್ಮೀರಿ ಫುಟ್ಬಾಲರ್ ಅಫ್ಶಾನ್ ಆಶಿಕಿರನ್ನು ಭೇಟಿ ಮಾಡಿದ್ದೆ. ಈ ಹಿಂದೆ ಅವರೂ ಕೂಡ ಕಲ್ಲು ತೂರಾಟದಲ್ಲಿ ಪಾಲ್ಗೊಂಡಿರುವುದಾಗಿ ಹೇಳಿಕೊಂಡಿದ್ದರು. ಕ್ರೀಡಾಲೋಕಕ್ಕೆ ಕಾಲಿಟ್ಟ ಬಳಿಕ ಅವರ ಇಡೀ ಜೀವನವೇ ಬದಲಾಯಿತು. ಕ್ರೀಡೆ ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ಮಕ್ಕಳನ್ನು ಬಹುಬೇಗ ತಪ್ಪು ಹಾದಿಗೆಳೆಯಬಹುದು. ಆದರೆ, ನಮಗೆ ಸತ್ಯ ಗೊತ್ತಿದೆ. ಹೀಗಾಗಿಯೇ ಮಕ್ಕಳ ವಿರುದ್ಧ ಎಲ್ಲಾ ಕಲ್ಲು ತೂರಾಟ ಪ್ರಕರಗಳನ್ನು ಕೈಬಿಡುತ್ತಿದ್ದೇವೆಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು, ಕ್ರೀಡೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಕೊಂಡಾಡಿದ್ದಾರೆ.
ಇತರೆ ರಾಷ್ಟ್ರಗಳಲ್ಲಿರುವ ಮಕ್ಕಳಂತೆಯೇ ಇಲ್ಲಿರುವ ಮಕ್ಕಳಿಗೂ ಅತ್ಯುತ್ತಮ ಅವಕಾಶಗಳ ವಾತಾವರಣನ್ನು ನಿರ್ಮಾಣ ಮಾಡಬೇಕು. ಇದರಿಂದ ಕಲ್ಲು ತೂರಾಟದಂತಹ, ಬಾಂಬ್ ಸ್ಫೋಟಗೊಳಿಸುವ ಹಾಗೂ ಗುಂಡಿನ ದಾಳಿಗಳಂತಹ ಘಟನೆಗಳು ನಿಯಂತ್ರಣಗೊಂಡು, ಧನಾತ್ಮಕ ವಾತಾವರಣದಲ್ಲಿ ಬೆಳೆಯುವಂತ ಅವಕಾಶಗಳು ದೊರೆಯುತ್ತವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics