ದೇಶ

ಪ್ರಣಬ್, ಭಾಗವತ್ ಭಾಷಣ ಶ್ಲಾಘನಾರ್ಹ: ಅಡ್ವಾಣಿ

Sumana Upadhyaya

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿ ಭಾರತೀಯತೆ ಮತ್ತು ರಾಷ್ಟ್ರೀಯತೆ ಮೇಲೆ ಬೆಳಕು ಚೆಲ್ಲುವ ತಮ್ಮ ಆದರ್ಶ ತತ್ವಗಳ ಬಗ್ಗೆ ಮಾತನಾಡಿದ್ದು ದೇಶದ ಸಮಕಾಲೀನ ಇತಿಹಾಸದ ಪ್ರಮುಖ ಘಟನೆಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಬಣ್ಣಿಸಿದ್ದಾರೆ.

ಕಾಂಗ್ರೆಸ್ ನೊಂದಿಗೆ ದಶಕಗಳಿಂದ ಗುರುತಿಸಿಕೊಂಡಿರುವ ಪ್ರಣಬ್ ಮುಖರ್ಜಿಯವರು ಹಿಂದುತ್ವ ಸಂಘಟನೆಯ ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಹೋಗಿದ್ದು ಇಬ್ಬರೂ ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ಗಮನಾರ್ಹ ಸಾಮರಸ್ಯ ಮತ್ತು ಅನುರಣನ ಕಂಡುಬಂದಿತ್ತು ಎಂದು ಶ್ಲಾಘಿಸಿದ್ದಾರೆ.

ಆರ್ ಎಸ್ಎಸ್ ನ ಜೀವಾವಧಿ ಸ್ವಯಂಸೇವಕರಾಗಿರುವ ಅಡ್ವಾಣಿ, ಸೈದ್ಧಾಂತಿಕ ಸಂಬಂಧಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮೀರಿ ಪ್ರಣಬ್ ಮುಖರ್ಜಿ ಹಾಗೂ ಮೋಹನ್ ಭಾಗವತ್ ಅವರು ನಡೆಸಿರುವ ಸಂಭಾಷಣೆ ದೇಶಕ್ಕೆ ಶ್ಲಾಘನೆಗೆ ಅರ್ಹವಾಗಿದೆ. ಭಾರತದಲ್ಲಿ ಏಕತೆ ಮುಖ್ಯ ಎಂಬುದನ್ನು ಇಬ್ಬರೂ ನಾಯಕರು ಉಲ್ಲೇಖಿಸಿದ್ದಾರೆ. ಅದು ಎಲ್ಲಾ ವಿವಿಧತೆಯನ್ನು ಸ್ವೀಕರಿಸಿ ಗೌರವಿಸುತ್ತದೆ ಎಂದು ಹೇಳಿಕೆಯಲ್ಲಿ ಅಡ್ವಾಣಿ ತಿಳಿಸಿದ್ದಾರೆ.

ಬಿಜೆಪಿ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಡ್ವಾಣಿ ಸಂಭಾಷಣೆಯ ನೆಪದಲ್ಲಿ ಆರ್ ಎಸ್ಎಸ್ ಮೋಹನ್ ಭಾಗವತ್ ಅವರ ನಾಯಕತ್ವದಲ್ಲಿ ದೇಶದ ವಿವಿಧ ವರ್ಗಗಳ ಜನರನ್ನು ತಲುಪಲು ತನ್ನ ಪ್ರಯತ್ನವನ್ನು ತೀವ್ರಗೊಳಿಸುತ್ತಿರುವುದು ಹರ್ಷದಾಯಕ ಎಂದರು.

ಮುಕ್ತತೆ ಮತ್ತು ಪರಸ್ಪರ ಗೌರವಗಳಿಂದ ಇಂತಹ ಮಾತುಕತೆಗಳನ್ನು ನಡೆಸುವುದು ದೇಶದಲ್ಲಿ ಸಹಿಷ್ಣುತೆ, ಸಾಮರಸ್ಯ ಮತ್ತು ಸಹಕಾರಗಳನ್ನು ಬೆಳೆಸಲು ಹೆಚ್ಚು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

SCROLL FOR NEXT