ದೇಶ

ವೈಷ್ಣೋದೇವಿ ಯಾತ್ರೆ ವೇಳೆ ಭೂಕುಸಿತ: ಪ್ರಾಣದ ಹಂಗು ತೊರೆದು ಯಾತ್ರಿಕರ ರಕ್ಷಿಸಿದ ಯೋಧನಿಗೆ ಮರಣೋತ್ತರ ಪದಕ

Manjula VN
ನವದೆಹಲಿ: 2016ರ ವೈಷ್ಣೋದೇವಿ ಯಾತ್ರೆ ವೇಳೆ ಸಂಭವಿಸಿದ ಭೂಕುಸಿತ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಯಾತ್ರಿಕರನ್ನು ರಕ್ಷಣೆ ಮಾಡಿದ್ದ ಯೋಧ ಹರ್ವಿಂದರ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಪ್ರಧಾನಮಂತ್ರಿ ಪದಕ ಪ್ರದಾನ ಮಾಡುವ ಮೂಲಕ ಗೌರವಿಸಿದೆ. 
ಯೋಧ ಹರ್ವಿಂದರ್ ಸಿಂಗ್ ಅವರಿಗೆ ಮರಣೋತ್ತರ ಪ್ರಧಾನಮಂತ್ರಿ ಪದಕ ಪ್ರದಾನ ಮಾಡಿರುವ ಕುರಿತಂತೆ ಅರೆಸೇನಾ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 
ಸಿಆರ್'ಪಿಎಫ್ ಮುಖ್ಯ ಪೇದೆಯಾಗಿದ್ದ ಹರ್ವಿಂದರ್ ಸಿಂಗ್ ಅವರು ಪ್ರಾಣದ ಹಂಗು ತೊರೆದು 2016ರಲ್ಲಿ ವೈಷ್ಣೋದೇವಿ ಪ್ರದೇಶದಲ್ಲಿ ಸಂಭವಿಸಿದ್ದ ಭೂಕುಸಿತ ಸಂದರ್ಭದಲ್ಲಿ ಹಲವಾರು ಯಾತ್ರಿಕರ ಜೀವವನ್ನು ರಕ್ಷಣೆ ಮಾಡಿದ್ದರು. 
ಪ್ರತೀನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡುವ ವೈಷ್ಣೇ ದೇವಿ ದೇಗುಲದಲ್ಲಿ ಭದ್ರತೆಗಾಗಿ ಸಿಆರ್'ಪಿಎಫ್ ಹರ್ವಿಂದರ್ ಸಿಂಗ್ ಅವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಕೆಲ ಮಹಿಳೆ ಮತ್ತು ಮಕ್ಕಳು ಭೂಕುಸಿತದಿಂದ ಕಲ್ಲು ಮಣ್ಣುಗಳಲ್ಲಿ ಸಿಲುಕಿರುವುದನ್ನು ಕಂಡ ಸಿಂಗ್ ಅವರು ರಕ್ಷಣೆಗೆ ಧಾವಿಸಿದ್ದರು. ಕಾರ್ಯಾಚರಣೆ ವೇಳೆ ಬಂಡೆಯೊಂದು ಸಿಂಗ್ ಅವರ ತಲೆಗೆ ಅಪ್ಪಳಿಸಿ ಸಿಂಗ್ ಅವರು ಹುತಾತ್ಮರಾಗಿದ್ದರು. ಘಟನೆಯಲ್ಲಿ ವೀರ ಹಾಗೂ ಸ್ವತ್ಯಾಗ ಮೆರೆದ ಯೋಧನಿಗೆ ಇದೀಗ ಸರ್ಕಾರ ಗೌರವಿಸಿದೆ. 
ಜಮ್ಮುವಿನ ರೇಸಿ ಜಿಲ್ಲೆಯ ಟ್ರಿಕುಟಾ ಬೆಟ್ಟಗಳಲ್ಲಿ ಉಗ್ರರು ಮತ್ತು ವಿಧ್ವಸಂಕ ಬೆದರಿಕೆಗಳ ವಿರುದ್ಧ ಗುಹೆ ದೇವಾಲಗಳನ್ನು ರಕ್ಷಣೆ ಮಾಡಲು ಸಿಆರ್'ಪಿಎಫ್ ಪಡೆಗಳು ಕಾರ್ಯನಿರ್ವಹಿಸುತ್ತವೆ. 
SCROLL FOR NEXT