ಮಧ್ಯ ಪ್ರದೇಶ: ಬಿಜೆಪಿ ಶಾಸಕರಿಂದ ಪೋಲೀಸ್ ಪೇದೆಗೆ ಕಪಾಳ ಮೋಕ್ಷ, ಪ್ರಕರಣ ದಾಖಲು
ಭೋಪಾಲ್(ಮಧ್ಯ ಪ್ರದೇಶ): ಕರ್ತವ್ಯದಲ್ಲಿದ್ದ ಪೋಲೀಸ್ ಪೇದೆಯೊಬ್ಬರಿಗೆ ಬಿಜೆಪಿ ಶಾಸಕ ಕಪಾಳ ,ಮೋಕ್ಷ ಮಾಡಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ ಉದಯ್ ನಗರ ಪೊಲೀಸ್ ಠಾಣೆಯಲ್ಲಿ ನಡೆದಿರುವ ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿಯೂ ದಾಖಲಾಗಿದೆ. ಬಿಜೆಪಿ ಶಾಸಕ ಚಂಪಾಲಾಲ್ ದೇವ್ಡಾ ಈ ರೀತಿಯಾಗಿ ಪೋಲೀಸ್ ಪೇದೆಗೆ ಕಪಾಳ ಮೋಕ್ಷ ಮಾಡಿದ ಶಾಸಕನಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗುರುವಾರ ರಾತ್ರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಕರೆತಂದಿದ್ದ ಪೋಲೀಸರು ಅವರನ್ನು ನಿರ್ಬಂಧಿತ ಪ್ರದೇಶದಲ್ಲಿ ಕುಳ್ಳರಿಸಿದ್ದರು. ಆಗ ಅಲ್ಲಿಗೆ ಪ್ರವೇಶಿಸಿದ ಶಾಸಕ ದೇವ್ಡಾ ಅವರ ಸೋದರಳಿಯ ನಿರ್ಬಂಧಿತ ಪ್ರದೇಶ ಪ್ರವೇಶಿಸಿದ್ದಲ್ಲದೆ ಅಲ್ಲಿ ಕುಳ್ಳರಿಸಲಾಗಿದ್ದ ಓರ್ವ ಆರೋಪಿಯ ಕೈಲಿದ್ದ ನೀರಿನ ಬಾಟಲ್ ಕಿತ್ತುಕೊಂಡು ಎಸೆದಿದ್ದಾರೆ.
ಸಂತೋಷ್ ಎನ್ನುವ ಪೇದೆ ಇದನ್ನು ಪ್ರಶ್ನಿಸಿದ್ದಾರೆ. ಆಗ ಶಾಸಕರ ಸೋದರಳಿಯ ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದಿದ್ದಾರೆ. ಶಾಸಕ ದೇವ್ಡಾ ಪೋಲೀಸ್ ಠಾಣೆಯೊಳಗೆ ಆಗಮಿಸಿ ಪೇದೆ ಸಂತೋಷ್ ಅವರ ಕಪಾಳಕ್ಕೆ ಎರಡು ಬಾರಿ ಹೊಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ.
ಈ ಕುರಿತಂತೆ ಪ್ರತಿಕ್ರಯಿಸಿರುವ ಎಸ್ ಪಿ ಅನ್ಶುಮನ್ ಸಿಂಗ್ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics