ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ 'ಲೆಫ್ಟಿನೆಂಟ್ ಗವರ್ನರ್, ದೆಹಲಿ ಚೋಡೊ' ಎಂಬ ಘೋಷಣೆಯೊಂದಿಗೆ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನಕ್ಕಾಗಿ ರಾಷ್ಟ್ರ ರಾಜಧಾನಿಯಾದ್ಯಂತ ಆಂದೋಲನಕ್ಕೆ ಕರೆ ನೀಡಿದ್ದಾರೆ.
ಇಂದು ತಮ್ ನಿವಾಸದಲ್ಲಿ ಪಕ್ಷದ ವಾರ್ಡ್ ಮಟ್ಟದ ಪದಾಧಿಕಾರಿಗಳನ್ನು ಮತ್ತು ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ದೆಹಲಿ ಪೂರ್ಣ ರಾಜ್ಯಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮದಂತೆ ಹೋರಾಟ ನಡೆಸಿ ಎಂದರು.
ಮಹಾತ್ಮ ಗಾಂಧಿ ಅವರು ಬ್ರಿಟಿಷ್ ಆಡಳಿತದ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದ್ದರು. ಈಗ ಆಮ್ ಆದ್ಮಿ ಪಾರ್ಟಿ 'ಲೆಫ್ಟಿನೆಂಟ್ ಗವರ್ನರ್, ದೆಹಲಿ ಚೋಡೊ' ಚಳವಳಿ ಆರಂಭಿಸಲಿದೆ ಎಂದರು.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಎಲ್ಲಾ ಬ್ರಿಟಿಷ್ ವೈಸರಾಯ್ ಗಳನ್ನು ತೆಗೆದು ಹಾಕಲಾಗಿತ್ತು. ಆದರೆ ದೆಹಲಿಯಲ್ಲಿ ವೈಸರಾಯ್ ಜಾಗದಲ್ಲಿ ಲೆಫ್ಟಿನೆಂಟ್ ಗವರ್ನರನ್ನು ನೇಮಿಸಲಾಗಿದೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.
ಆಂದೋಲನದ ಮೊದಲ ಭಾಗವಾಗಿ ಜೂನ್ 17ರಿಂದ ಜೂನ್ 24ರ ವರೆಗೆ ಆಪ್ ನಾಯಕರು, ಶಾಸಕರು ಮತ್ತು ಕಾರ್ಯಕರ್ತರು ದೆಹಲಿಯಲ್ಲಿ 300 ಸ್ಥಳಗಳಲ್ಲಿ ಸಭೆ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಜುಲೈ 1ರಂದು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.