ಪುಲ್ವಾಮ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಕೋರ್ಟ್ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿರುವ ಉಗ್ರರು ಇಬ್ಬರು ಪೊಲೀಸರನ್ನು ಕೊಂದು ಹಾಕಿದ್ದಾರೆ.
ಪುಲ್ವಾಮ ಜಿಲ್ಲೆಯ ನ್ಯಾಯಾಲಯಗಳ ಸಂಕೀರ್ಣದಲ್ಲಿ ಈ ದಾಳಿ ನಡೆದಿದ್ದು, ಉಗ್ರರ ದಾಳಿಯಿಂದಾಗಿ ಇಬ್ಬರು ಪೊಲೀಸರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಂತೆಯೇ ಮೂವರು ಪೊಲೀಸರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಸೇನಾಸ್ಪತ್ರೆಗೆ ಸೇರಿಸಿದ್ದಾರೆ.
ಪ್ರಸ್ತುತ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕಾಗಮಿಸಿದ ಸೇನಾಪಡೆಗಳು ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ದು, ಉಗ್ರರು ಮತ್ತು ಸೇನಾಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ.
ಮತ್ತೊಂದು ಪ್ರಕರಣದಲ್ಲಿ ಅನಂತ್ ನಾಗ್ ಜಿಲ್ಲೆಯ ಜಂಗ್ಲಾಟ್ ಮಂಡಿ ಮೀಸಲು ಪಡೆಯ ಕ್ಯಾಂಪ್ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಈ ವೇಳೆ ನಾಲ್ಕು ಮಂದಿ ಸಿಆರ್ ಪಿಎಫ್ ಯೋಧರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.