ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಇದೀಗ ಒಗ್ಗೂಡಿದ್ದು, ಭಾರತವನ್ನು ಜಂಟಿ ಟಾರ್ಗೆಟ್ ಮಾಡಿಕೊಂಡು ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿವೆ ಎಂದು ತಿಳಿದುಬಂದಿದೆ.
ಭಾರತವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೈಶ್ ಇ ಮೊಹಮ್ಮದ್, ಲಷ್ಕರ್ ಇ ತೊಯ್ಬಾ ಹಾಗು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದು ತಿಳಿದುಬಂದಿದೆ. ಈ ಹಿಂದೆ ಜಮ್ಮುವಿನ ನಗ್ರೊಟಾದಲ್ಲಿ ಭದ್ರತಾ ಪಡೆಗಳ ಕ್ಯಾಂಪ್ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿ ಪ್ರಕರಣ ಸಂಬಂಧ ಬಂಧನದಲ್ಲಿರುವ ಜೈಶ್ ಇ ಮೊಹಮ್ಮದ್ ಉಗ್ರ ಆಶಿಕ್ ಬಾಬಾ ಈ ಬಗ್ಗೆ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದಾನೆ.
ಆತನೇ ಹೇಳಿಕೊಂಡಿರುವಂತೆ ಉಗ್ರ ಆಶಿಕ್ ಬಾಬಾ ಕುಖ್ಯಾತ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ನ ಮುಖ್ಯ ಮೌಲಾನಾ ಮಸೂದ್ ಅಜರ್ ನನ್ನು ಭೇಟಿಯಾಗಿದ್ದೆ, ಅಲ್ಲದೆ ಪಾಕಿಸ್ತಾನದಲ್ಲಿರುವ ಅನೇಕ ಭಯೋತ್ಪಾದಕ ಕ್ಯಾಂಪ್ ಗಳಿಗೆ ಖುದ್ದು ಭೇಟಿ ನೀಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಅಂತೆಯೇ 2017ರಲ್ಲಿ ಪುಲ್ವಾಮಾದ ಪೊಲೀಸ್ ಠಾಣೆ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಎಂಟು ಸಿಬ್ಬಂದಿ ಹುತಾತ್ಮರಾಗಿದ್ದರು. ಈ ದಾಳಿಯನ್ನು ಜಮ್ಮು ಮತ್ತು ಕಾಶ್ಮೀರದ ಜೈಶ್ ಉಗ್ರ ಸಂಘಟನೆ ಭಯೋತ್ಪಾದಕ ಮುಫ್ತಿ ವಕಾಸ್ ಸಂಯೋಜಿಸಿದ್ದ ಎಂದೂ ಆಶಿಕ್ ಬಾಬಾ ಹೇಳಿದ್ದಾನೆ.
ಇನ್ನು ಇದೇ ಮುಫ್ತಿ ವಕಾಸ್ ನನ್ನು ಭದ್ರತಾ ಪಡೆಗಳು ಇದೇ ವರ್ಷ ಮಾರ್ಚ್‌ನಲ್ಲಿ ಹತ್ಯಗೈದಿದ್ದವು. ಆಗಸ್ಟ್ 26, 2017ರಲ್ಲಿ ಸೇನಾ ಸಮವಸ್ತ್ರಗಳನ್ನು ಧರಿಸಿ ಬಂದಿದ್ದ ಭಯೋತ್ಪಾದಕರು ಭದ್ರತಾ ಸಿಬ್ಬಂದಿಯ ಕುಟುಂಬಗಳಿದ್ದ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿದ್ದರು.
ಹುರಿಯತ್ ನಾಯಕನ ನೆರವಿನಿಂದಾಗಿ ಜೈಶ್ ಉಗ್ರ ಸಂಘಟನೆ ಕ್ಯಾಂಪ್ ಗೆ ಭೇಟಿ ನೀಡಿದ್ದ ಆಶಿಕ್ ಬಾಬಾ ಇನ್ನು ಆಶಿಕ್ ಬಾಬಾ ನೀಡಿರುವ ಮಾಹಿತಿಯಂತೆ ಕಾಶ್ಮೀರದ ಹುರಿಯತ್ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ ಸಹಾಯದಿಂದ ಪಾಕಿಸ್ತಾನದ ಉಗ್ರ ಸಂಘಟನೆಗಳ ಕ್ಯಾಂಪ್ ಗೆ ಭೇಟಿ ನೀಡಿದ್ದನಂತೆ. ಸೈಯ್ಯದ್ ಅಲಿ ಶಾ ಗಿಲಾನಿಯೇ ಬಾಬಾಗೆ ಪಾಕಿಸ್ತಾನದ ವೀಸಾ ಪಡೆಯಲು ನೆರವಾಗಿದ್ದರಂತೆ. ಪಾಕಿಸ್ತಾನದ ವೀಸಾ ಪಡೆದಿದ್ದ ಬಾಬಾ ಅಲ್ಲಿನ ಬಹವಲ್‌ಪುರದಲ್ಲಿರುವ ಜೈಶ್ ಕಚೇರಿಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿದೆ.
ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದು, ಭಾರತದ ಮಿಲಿಟರಿ ಹಾಗು ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ಇವರಿಗೆ ಐಎಸ್‌ಐ ಬೆಂಬಲ ನೀಡುತ್ತಿರುವ ವಿಚಾರ ತಿಳಿದುಬಂದಿದೆ. ಈ ಕೃತ್ಯಗಳಿಗೆಲ್ಲಾ ಕೊಲ್ಲಿ ದೇಶಗಳಿಂದ ಭಾರೀ ಪ್ರಮಾಣದಲ್ಲಿ ಹಣ ಹರಿದುಬರುತ್ತಿತ್ತು ಎಂದು ತಿಳಿದುಬಂದಿದೆ. ಕಣಿವೆಯಲ್ಲಿ ಜಿಹಾದಿಗಳ ಭಯೋತ್ಪಾದಕ ದಾಳಿಗಳ ಯೋಜನೆಗಳ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಬಾಬಾ ಬಂಧನ ಭದ್ರತಾ ಪಡೆಗಳಿಗೆ ನೆರವು ನೀಡುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos