ಪಾಟ್ನಾ: ಅಮಾನತುಗೊಂಡ ಬಿಜೆಪಿ ಸಂಸದ ಕೀರ್ತಿ ಆಜಾದ್ ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳುವ ಮೂಲಕ 'ಕೈ' ಹಿಡಿಯುವ ಸುಳಿವು ನೀಡಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನಸಾಮಾನ್ಯರಿಗೆ ಸಂಬಂಧಿಸಿದ ವಿಷಯಗಳನ್ನು ಬಹಳ ಪರಿಣಾಮಕಾರಿಯಾಗಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ದರ್ಭಂಗನಿಂದಲೇ ಸ್ಪರ್ಧಿಸುತ್ತೇನೆ ಮತ್ತು ರಾಷ್ಟ್ರೀಯ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಕೀರ್ತಿ ಆಜಾದ್ ಹೇಳಿದ್ದಾರೆ.
ಡಿಡಿಸಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಆರೋಪ ಮಾಡಿದ್ದ ಕೀರ್ತಿ ಆಜಾದ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.
ಜೇಟ್ಲಿ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ಹಾಗೂ ಪಕ್ಷ ವಿರೋಧಿ ನಡೆಗಾಗಿ ಆಜಾದ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಬಿಜೆಪಿ ಸ್ಪಷ್ಟಪಡಿಸಿತ್ತು.