ದೇಶ

ವಂಚನೆ ಪ್ರಕರಣ: ಹಲವು ಪಾಸ್ ಪೋರ್ಟ್ ಗಳೊಂದಿಗೆ ವಿದೇಶ ಸುತ್ತುತ್ತಿರುವ ನೀರವ್ ಮೋದಿ

Srinivasamurthy VN
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13000 ಕೋಟಿ ರೂ.ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ವಿವಿಧ ದೇಶಗಳನ್ನು ಸುತ್ತುತ್ತಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ನೀರವ್ ಮೋದಿ ಕುರಿತು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಕಳೆದ ಮಾರ್ಚ 31ರವರೆಗೂ ನೀರವ್ ಮೋದಿ ಬ್ರಿಟನ್ ನಲ್ಲೇ ಇದ್ದ. ಬಳಿಕ ತನ್ನ ಇತರೆ ಪಾಸ್ ಪೋರ್ಟ್ ಗಳ ಸಹಾಯದಿಂದ ಮತ್ತೊಂದು ದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಶಂಕಿಸಿದ್ದಾರೆ. 
ಎನ್ ಸರಣಿಯ ಪಾಸ್ ಪೋರ್ಟ್ ಗಳು ನೀರವ್ ಮೋದಿ ಬಳಿ ಇದ್ದು, ಈ ಪಾಸ್ ಪೋರ್ಟ್ ಗಳಿಂದಲೇ ಆತ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ. ಇದಲ್ಲದೆ ಜೆಡ್ ಸರಣಿಯ ಪಾಸ್ ಪೋರ್ಟ್ ಕೂಡ ನೀರವ್ ಮೋದಿ ಬಳಿ ಇದೆ. ಅಧಿಕಾರಿಗಳು ಶಂಕಿಸಿರುವಂತೆ ನೀರವ್ ಮೋದಿ ಬಳಿ ಕನಿಷ್ಛ 4 ರಿಂದ 5 ಪಾಸ್ ಪೋರ್ಟ್ ಗಳು ಮತ್ತು ದೀರ್ಘಕಾಲ ವಾಸದ ವೀಸಾ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪ್ರಕರಣ ಸಂಬಂಧ ಇಂಟರ್ ಪೋಲ್ ಸಂಪರ್ಕ ಸಾಧಿಸಿರುವ ಸಿಬಿಐ ಅಧಿಕಾರಿಗಳು ನೀರವ್ ಮೋದಿ ಕುಟುಂಬಸ್ಥರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ. ಪ್ರಮುಖವಾಗಿ ಉದ್ಯಮಿ ನೀರವ್ ಮೋದಿ, ಆತನ ಸಹೋದರ ನಿಶಾಲ್ ಮೋದಿ, ಅಂಕಲ್ ಮೆಹುಲ್ ಚೋಕ್ಸಿ, ಸುಭಾಷ್ ಪರಬ್ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ಸಿಬಿಐ ಅಧಿಕಾರಿಗಳು ಮನವಿ ಮಾಡಿದ್ದಾರೆ. ನೀರವ್ ಮೋದಿ ಸಹೋದರ ನಿಶಾಲ್ ಮೋದಿ ಬೆಲ್ಜಿಯನ್ ನಾಗರೀಕತ್ವ ಹೊಂದಿದ್ದಾನೆ.
SCROLL FOR NEXT