ದೇಶ

ಅಕ್ರಮ ಹಣ ವಹಿವಾಟು: ವಿಜಯ್ ಮಲ್ಯ ವಿರುದ್ಧ ಹೊಸ ಚಾರ್ಜ್ ಶೀಟ್

Lingaraj Badiger
ನವದೆಹಲಿ: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಹಾಗೂ ಅವರ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಶೀಘ್ರದಲ್ಲೇ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಹೊಸ ಚಾರ್ಜ್ ಶೀಟ್ ಸಲ್ಲಿಸಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಾಖಲಿಸಿದ ದೂರಿನ ಅನ್ವಯ 6,027 ಕೋಟಿ ರುಪಾಯಿ ವಂಚನೆ ಆರೋಪದಡಿಯಲ್ಲಿ ದೋಷಾರೋಪಪಟ್ಟಿ ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ವಿಜಯ್ ಮಲ್ಯ ಅವರ 9000 ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಬೇಕೆಂದು ಕೇಂದ್ರ ತನಿಖಾ ದಳವು ನ್ಯಾಯಾಲಕ್ಕೆ ಮನವಿ ಮಾಡಿದೆ.
ಕಳೆದ ವರ್ಷ 900 ಕೋಟಿ ವಂಚನೆಯಡಿ ಮೊದಲ ಆರೋಪ ಪಟ್ಟಿ ದಾಖಲಿಸಲಾಗಿತ್ತು. ಇದೀಗ ಮಲ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ.
ವಿಜಯ್ ಮಲ್ಯ ಅವರು 2005–10ರ ಅವಧಿಯಲ್ಲಿ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದಿಂದ 6,027 ಕೋಟಿ ರುಪಾಯಿ ಸಾಲವಾಗಿ ಪಡೆದುಕೊಂಡಿದ್ದರು.
ವಂಚನೆ ಹಾಗೂ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯಸದ್ಯ ಜಾಮೀನಿನ ಮೇಲೆ ಹೊರಗಿದ್ದು, ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಲ್ಲಿ ಡಿಸೆಂಬರ್ 4ರಿಂದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕೋರ್ಟ್ ತನ್ನ ನಿರ್ಧಾರ ಪ್ರಕಟಿಸಲಿದೆ.
SCROLL FOR NEXT