ದೇಶ

ವಿಜಯ್ ಮಲ್ಯಗೆ ಸೇರಿದ 12,500 ಕೋಟಿ ರೂ ಮೊತ್ತದ ಆಸ್ತಿ ವಶಕ್ಕೆ ಮುಂದಾದ ಇಡಿ

Nagaraja AB

ನವದೆಹಲಿ: ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಹಿಂದಿರುಗಿಸದೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ  ಮದ್ಯ ಉದ್ಯಮಿ ವಿಜಯ್ ಮಲ್ಯನನ್ನು ದೇಶಭ್ರಷ್ಟ ಅಪರಾಧಿ ಎಂದು ಘೋಷಿಸಿ, ಆತನಿಗೆ ಸೇರಿದ 12,500 ಕೋಟಿ ರೂಪಾಯಿ ಮೊತ್ತದ ಆಸ್ತಿ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ  ಜಾರಿ ನಿರ್ದೇಶನಾಲಯ ಅಧಿಕೃತವಾಗಿ ಇಂದು  ನ್ಯಾಯಾಲಯದ ಮೊರೆ ಹೋಗಿದೆ.

ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳ ಆಸ್ತಿ ವಶಪಡಿಸಿಕೊಳ್ಳಲು ಅಧಿಕಾರ ನೀಡುವ ಸುಗ್ರೀವಾಜ್ಞೆಯಡಿ  ಮುಂಬೈಯ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯ್ ಮಲ್ಯಗೆ ಸೇರಿದ 12,500 ಕೋಟಿ ರೂಪಾಯಿ ಮೊತ್ತದ  ಸ್ಥಿರ ಹಾಗೂ ಚರ ಆಸ್ತಿಗಳ ವಶ ಈ ಅರ್ಜಿಯಲ್ಲಿ ಸೇರಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಹಿಂದೆ ಪಿಎಂಎಲ್ ಎ ಅಡಿ ದಾಖಲಿಸಿರುವ ಎರಡು ಜಾರ್ಜ್ ಶೀಟ್ ನಲ್ಲಿ ಇಡಿ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದು, ನ್ಯಾಯಾಲಯದಿಂದ ವಿಜಯ್ ಮಲ್ಯನನ್ನು  ತಲೆಮರೆಸಿಕೊಂಡಿದ್ದ ಅಪರಾಧಿ ಎಂದು ಘೋಷಿಸಬೇಕೆಂದು ಮನವಿ ಮಾಡಿಕೊಂಡಿದೆ.

ವಿವಿಧ ಬ್ಯಾಂಕುಗಳಿಂದ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯನನ್ನು ಕಾನೂನು ವ್ಯವಸ್ಥೆಯಡಿ ಸ್ವದೇಶಕ್ಕೆ ಕರೆತರಲು ಭಾರತ ತೀವ್ರ ಪ್ರಯತ್ನ ನಡೆಸುತ್ತಿದೆ.

ಇಂತಹ ದೇಶ ಭ್ರಷ್ಟರನ್ನು ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ  ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸುಗ್ರೀವಾಜ್ಞೆ 2018 ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದ ನಂತರ ರಾಷ್ಟ್ರಪತಿಗಳ ಅಂಗೀಕಾರವೂ ದೊರೆತಿದೆ.

ಹಣ ವರ್ಗಾವಣೆ ಕಾಯ್ದೆ 2012ರ ಅಡಿಯಲ್ಲಿ ವಿಶೇಷ ಕೋರ್ಟ್ ಗಳಿಗೆ  ವಿಶೇಷ ವಿನಾಯಿತಿಯನ್ನು ಈ ಸುಗ್ರೀವಾಜ್ಞೆ ನೀಡಲಿದ್ದು, ದೇಶಭ್ರಷ್ಟರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿ  ಕೂಡಲೇ ಅವರ ಆಸ್ತಿ ವಶಪಡಿಸಿಕೊಳ್ಳಬಹುದಾಗಿದೆ.

ಅಪರಾಧ ಚಟುವಟಿಕೆ ನಡೆಸಿ ವಿದೇಶಕ್ಕೆ ಹಾರಿ ಹಿಂದಿರುಗದ  ದೇಶಭ್ರಷ್ಟರ ನ್ನು ಬಂಧಿಸಿ ಕಾನೂನು ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಈ ಸುಗ್ರೀವಾಜ್ಞೆ ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.  100 ಕೋಟಿ ರೂಪಾಯಿಗೂ ಹೆಚ್ಚು ವಂಚನೆ, ಚೆಕ್ ಬೌನ್ಸ್,  ಮತ್ತಿತರ ಕೇಸ್ ಗಳನ್ನು ಈ ಸುಗ್ರೀವಾಜ್ಞೆ ವ್ಯಾಪ್ತಿಗೊಳ್ಳಪಟ್ಟಿವೆ.

SCROLL FOR NEXT