ದೇಶ

ಅಮರನಾಥ ಯಾತ್ರೆಗೆ ಅಭೂತಪೂರ್ವ ಭದ್ರತೆ: ದ್ವಿಚಕ್ರ ವಾಹನ ಸ್ಕ್ವಾಡ್, ಪ್ರತಿ ವಾಹನಕ್ಕೂ ಆರ್ ಎಫ್ ಟ್ಯಾಗ್

Srinivas Rao BV
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಮರನಾಥಯಾತ್ರೆಗೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದ್ದು, 60 ದಿನಗಳಕಾಲ ನಡೆಯುವ ಯಾತ್ರೆಯನ್ನು ಯಾವುದೆ ಹಾನಿಯಾಗದಂತೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 
ಹಿಂದೆಂದಿಗಿಂತಲೂ ಈ ಬಾರಿ ಉಗ್ರರ ದಾಳಿಯ ಸಾಧ್ಯತೆ ಹೆಚ್ಚಿರುವುದರಿಂದ ಸರ್ಕಾರವೂ ಅದಕ್ಕೆ ತಕ್ಕಂತೆಯೇ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಿಆರ್ ಪಿಎಫ್ ವಿಶೇಷ ಮೊಟರ್ ಸೈಕಲ್ ಸ್ಕ್ವಾಡ್ ನ್ನು ರಚಿಸಿದೆ, " ಯಾತ್ರಾರ್ಥಿಗಳ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಯಾತ್ರಾರ್ಥಿಗಳನ್ನು ಕರೆದಿಯ್ಯುವ ಪ್ರತಿ ವಾಹನಕ್ಕೂ ಹೆಚ್ಚಿನ ಭದ್ರತೆ ನೀಡುವ ಉದ್ದೇಶದಿಂದ ವಿಶೇಷ ದ್ವಿಚಕ್ರ ವಾಹನಗಳ ಸ್ಕ್ವಾಡ್ ನ್ನು ರಚಿಸಲಾಗಿದೆ. ಇದೇ ತಂಡ ಆಂಬುಲೆನ್ಸ್ ಗಳ ಕಾರ್ಯವನ್ನೂ ನಿರ್ವಹಿಸಲಿವೆ" ಎಂದು ಸಿಆರ್ ಪಿಎಫ್ ವಕ್ತಾರರು ಹೇಳಿದ್ದಾರೆ. 
ಅಮರನಾಥ ಯಾತ್ರಿಕರನ್ನು ಕರೆದೊಯ್ಯುವ ಪ್ರತಿ ವಾಹನಗಳ ಮೇಲೆ ನಿಗಾವಹಿಸಲು ಪ್ರತಿ ವಾಹನಕ್ಕೂ ಆರ್ ಎಫ್ (ರೆಡಿಯೋ ಫ್ರೀಕ್ವೆನ್ಸಿ) ಟ್ಯಾಗ್ ನ್ನು ಅಳವಡಿಸಲಾಗುತ್ತದೆ. ಇದರ ಜೊತೆಗೆ ಭದ್ರತಾ ಪಡೆಗಳ ನಡುವೆ ಸಮನ್ವಯತೆ ಉತ್ತಮಗೊಳಿಸಲು ಜಂಟಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಯಾತ್ರಾರ್ಥಿಗಳು ತೆರಳುವ ಮಾರ್ಗ ಮಧ್ಯದಲ್ಲಿ 22,500 ಅರೆಸೇನಾ ಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಸ್ಯಾಟಲೈಟ್ ಗಳು, ಜಾಮರ್, ಸಿಸಿಟಿವಿ ಕ್ಯಾಮರಾ, ಬುಲೆಟ್ ಪ್ರೂಫ್ ಬಂಕರ್ ಗಳನ್ನು ನಿಯೋಜಿಸುವ ಮೂಲಕ ಯಾತ್ರೆಗೆ ಹಿಂದೆಂದೂ ಕೈಗೊಂಡಿರದ ಮಟ್ಟದಲ್ಲಿ ಭದ್ರತೆಯನ್ನು ಕೈಗೊಳ್ಳಲಾಗಿದೆ. 
SCROLL FOR NEXT