ನವದೆಹಲಿ: ಬಹುಕೋಟಿ 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಯ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆಗೆ ಸುಪ್ರೀಂ ಕೋರ್ಟ್ ಬುಧವಾರ ಗ್ರೀನ್ ಸಿಗ್ನಲ್ ನೀಡಿದ್ದು, ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ಯಾವುದೇ ತನಿಖಾಧಿಕಾರಿಯೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು ಎಂದು ಹೇಳಿದೆ.
ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ರಾಜೇಶ್ವರ್ ಸಿಂಗ್ ಅವರ ವಿರುದ್ಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಎಸ್ ಕೆ ಕೌಲ್ ಅವರನ್ನೊಳಗೊಂಡ ರಜಾ ಕಾಲದ ಪೀಠ, ಏರ್ ಸೆಲ್- ಮ್ಯಾಕ್ಸಿಸ್ ಡೀಲ್ ಪ್ರಕರಣ ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಅವರ ವಿರುದ್ಧ ತನಿಖೆಯ ಅಗತ್ಯ ಇದೆ ಎಂದು ಹೇಳಿದೆ.
ಸಿಂಗ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದ ಹೆಚ್ಚುವರಿ ಸೊಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರು, ಈ ಸಂಬಂಧ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಮಾಹಿತಿ ನೀಡಿದರು.
ಮುಚ್ಚಿದ ಲಕೋಟೆಯಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, 2ಜಿ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದೆ. ನಿಮ್ಮ(ಸಿಂಗ್) ವಿರುದ್ಧ ಆರೋಪಗಳು ಕೇಳಿಬಂದಿವೆ. ಅದು ಸರಿನಾ ಅಥವಾ ತಪ್ಪಾ ಎಂಬುದು ತನಿಖೆಯಿಂದ ತಿಳಿಯಲಿದೆ ಎಂದು ರಜಾ ಕಾಲದ ಪೀಠ ತಿಳಿಸಿದೆ.
ನೀವು ಕೇವಲ ಒಬ್ಬ ಅಧಿಕಾರಿ ಅಷ್ಟೆ. ನಿಮ್ಮ ವಿರುದ್ಧದ ಆರೋಪಗಳಿಗೆ ನೇರವಾಗಿ ಕ್ಲೀನ್ ಚಿಟ್ ನೀಡಲಾಗುವುದಿಲ್ಲ. ಪ್ರತಿಯೊಬ್ಬರು ಹೊಣೆಗಾರರೆ. ನೀವು ಸಹ ಯಾವುದೇ ಕ್ರಮಕ್ಕೂ ಸಿದ್ಧವಾಗಿರಬೇಕು. ನಿಮ್ಮ ಗೌರವಕ್ಕೆ ಧಕ್ಕೆ ಮಾಡುವ ಉದ್ದೇಶ ನಮಗೆ ಇಲ್ಲ. ಆದರೆ ನಿಮ್ಮ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ತನಿಖೆಯ ಅಗತ್ಯ ಇದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ತಿಳಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್ ಸಿಂಗ್ ಕಾನೂನು ಬಾಹಿರವಾಗಿ ಅಕ್ರಮ ಆಸ್ತಿ ಗಳಿಸಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಕೋರಿ ತನಿಖಾ ವರದಿಗಾರ ರಜನೀಸ್ ಕಪೂರ್ ಎಂಬುವವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದರು.