ದೇಶ

ಸಿಎಸ್ ಮೇಲೆ ಹಲ್ಲೆ: ಕೇಜ್ರಿವಾಲ್ ನಿವಾಸದ ಸಿಸಿಟಿವಿಯ 40 ನಿಮಿಷದ ದೃಶ್ಯ ಮಿಸ್ಸಿಂಗ್

Lingaraj Badiger
ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ನಡೆದ ದಿನದ ರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿನ ಸಿಸಿಟಿವಿಯ ದೃಶ್ಯಗಳಲ್ಲಿ ಸುಮಾರು 40 ನಿಮಿಷದ ದೃಶ್ಯಗಳು ಮಿಸ್ ಆಗಿವೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಖಚಿತಪಡಿಸಿದೆ.
ಈ ವಾರದ ಆರಂಭದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲದ ವರದಿ ಸ್ವೀಕರಿಸಿದ್ದು, ಅದರಲ್ಲಿ 40 ನಿಮಿಷಗಳ ವಿಡಿಯೋವನ್ನು ತಿರುಚಲಾಗಿದೆಯೋ ಅಥವಾ ಹಲ್ಲೆ ನಡೆದ ಸಂದರ್ಭದಲ್ಲಿನ ಸಮಯ ಬದಲಿಸಲಾಗಿದೆಯೋ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಫ್ರೆಬ್ರವರಿ 23ರಂದು ಪೊಲೀಸ್ ತಂಡ ಸಿಎಂ ಸಿವಿಲ್ ಲೈನ್ಸ್ ನಲ್ಲಿರುವ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಅಳವಡಿಸಿದ್ದ ಸಿಸಿಟಿವಿಯ ದೃಶ್ಯಗಳನ್ನು ಪರಿಶೀಲಿಸಿತ್ತು ಮತ್ತು ಹಾರ್ಡ್ ಡಿಸ್ಕ್ ಅನ್ನು ಜಪ್ತಿ ಮಾಡಿತ್ತು.
ದೆಹಲಿ ಸಿಎಂ ನಿವಾಸದಲ್ಲಿ ಒಟ್ಟು 14 ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದು, ಏಳು ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶೀಘ್ರದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಸೇರಿದಂತೆ ಇತರ ಆಪ್ ಶಾಸಕರ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಲಿದ್ದಾರೆ.
ಫೆ.19ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಸಭೆ ನಡೆಯುತ್ತಿದ್ದ ವೇಳೆ ತಮ್ಮ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಕಾರ್ಯದರ್ಶಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.
SCROLL FOR NEXT