ದೇಶ

ಭಾರೀ ಮಳೆ: ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಎಚ್ಚರಿಕೆ; ಅಮರನಾಥ ಯಾತ್ರೆ ಸ್ಥಗಿತ

Manjula VN
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಶನಿವಾರ ತಿಳಿದುಬಂದಿದೆ. 
ಜಮ್ಮು ಮತ್ತು ಕಾಶ್ನೀರದ ದಕ್ಷಿಣ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. 
ಭಾರೀ ಮಳೆಗೆ ದಕ್ಷಿಣ ಕಾಶ್ಮೀರದ ಸಂಗಮ್ ಮತ್ತು ಶ್ರೀನಗರದ ರಾಮ್ ಮುನ್ಷಿ ಬಾಗ್ ನದಿಗಳು ಅಪಾಯದ ಮಟ್ಟಿ ಮೀರಿ ಹರಿಯುತ್ತಿದ್ದು, ಕಾಶ್ಮೀರದಲ್ಲಿ ಇದೀಗ ಪ್ರವಾಹ ಪರಿಸ್ಥಿತಿ ಎದುರಾಗಿದೆ. 
ಅನಂತ್ ನಾಗ್ ಜಿಲ್ಲೆಯ ನುನ್ವಾನ್ ಮತ್ತು ಪಹಲ್ಗಾಂ, ಗಂದೇರ್ ಬಾಲ್ ಜಿಲ್ಲೆಯ ಬಲ್ಟಾಲ್ ಕಣಿವೆಯ ಮೇಲ್ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಎರಡು ದಿನಗಳ ಪಟ್ಟಿಗೆ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಸಲಾಗಿದೆ. 
ಹವಾಮಾನ ಇಲಾಖೆಯ ಅಧಿಕಾರಿಗಳು ಮಾತನಾಡಿ, ಹವಾಮಾನ ಪರಿಸ್ಥಿತಿ ನಾಳೆ ಮಧ್ಯಾಹ್ನ ಸುಧಾರಿಸಲಿದೆ. ಆದರೆ ಜುಲೈ.1 ಮತ್ತು 2 ರಂದು ಮತ್ತೆ ಕಾಶ್ಮೀರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. 

ಕಾಶ್ಮೀರ ಹವಾಮಾನ ಇಲಾಖೆ ನಿರ್ದೇಶಕಿ ಸೋನಮ್ ಲೋಟಸ್ ಮಾತನಾಡಿ, ಹಲವೆಡೆ ಭೂಕುಸಿತಗೊಳ್ಳುವ ಸಂಭವವಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಲಿದೆ, ಹಲವೆಡೆ ಪ್ರವಾಹ ಪರಿಸ್ಥಿತಿಗಳೂ ಕೂಡ ಎದುರಾಗಲಿವೆ. ಭೀತಿಗೊಳಗಾಗದಂತೆ ಜನರ ಬಳಿ ಮನವಿ ಮಾಡಿಕೊಳ್ಲಲಾಗುತ್ತಿದೆ. ಅಲ್ಲದೆ, ವದಂತಿಗಳನ್ನು ಹಬ್ಬಿಸದಂತೆಯೂ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 
SCROLL FOR NEXT