ರೈಲಿನಲ್ಲೇ ವಿವಾಹವಾದ ಜೋಡಿ: ರವಿಶಂಕರ್ ಗುರೂಜಿ ಸಾಕ್ಷಿ
ನವದೆಹಲಿ; ಚಲಿಸುತ್ತಿರುವ ರೈಲಿನಲ್ಲಿಯೇ ಜೋಡಿಯೊಂದು ವಿವಾಹವಾಗಿರುವ ವಿಶೇಷ ಪ್ರಸಂಗವೊಂದು ಉತ್ತರಪ್ರದೇಶದ ಗೋರಖ್ಪುರ ಮತ್ತು ಲಖನೌ ನಡುವೆ ಗುರುವಾರ ನಡೆದಿದೆ.
ಈ ವಿಶೇಷ ವಿವಾಹಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಸಾಕ್ಷಿಯಾದರು.
ಫಾರ್ಮಾಸಿಸ್ಟ್ ಸಚಿನ್ ಕುಮಾರ್ ಮತ್ತು ತೆರಿಗೆ ಇಲಾಖೆ ಉದ್ಯೋಗಿ ಜ್ಯೋತ್ಸ್ನಾ ಸಿಂಗ್ ಪಟೇಲ್ ಚಲಿಸುತ್ತಿರುವ ರೈಲಿನಲ್ಲಿಯೇ ಸರಳ ವಿವಾಹವಾದ ಜೋಡಿಗಳಾಗಿದ್ದಾರೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚಲಿಸುತ್ತಿರುವ ರೈಲಿನಲ್ಲಿ ಸರಳ ವಿವಾಹವಾಗಿದ್ದು, ಎಲ್ಲರಿಗೂ ಈ ಸಂದೇಶವನ್ನು ತಿಳಿಸಲು ನಾನು ಇಚ್ಛಿಸುತ್ತೇನೆಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ರವಿಶಂಕರ್ ಗುರೂಜಿಯವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಸಂದೇಶ ಹಾಗೂ ಫೋಟೋವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೂ ಟ್ಯಾಗ್ ಮಾಡಿದ್ದಾರೆ.
ವಿವಾಹಕ್ಕೆ ರವಿಶಂಕರ್ ಗುರೂಜಿಯವರಿಗೆ ಆಹ್ವಾನ ನೀಡಲಾಗಿತ್ತೇ ಅಥವಾ ಪ್ರಯಾಣದ ವೇಳೆ ಸರಳ ವಿವಾಹಕ್ಕೆ ಸಾಕ್ಷಿಯಾಗಿದ್ದರೇ ಎಂಬುದು ಸ್ಪಷ್ಟವಾಗಿಲ್ಲ.