ದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಗೆಲುವು ಪ್ರಧಾನಿ ನರೇಂದ್ರಮೋದಿ ಅವರ ಆಡಳಿತಕ್ಕೆ ಸಂದ ಜಯವಾಗಿದ್ದು, ಕರ್ನಾಟಕವೇ ನಮ್ಮ ಮುಂದಿನ ನಡೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ತ್ರಿಪುರಾದಲ್ಲಿ ಬಿಜೆಪಿಗೆ ಸ್ಪಷ್ಪ ಬಹುಮತ ದೊರಕಿದೆ. ಮೇಘಾಲಯವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೂ ಬಿಜೆಪಿ, ಎನ್ ಡಿಎ ಮೈತ್ರಿಕೂಟದ ಆಡಳಿತವಿರುವ ರಾಜ್ಯ 21 ಆಗಲಿದೆ ಎಂದರು.
ಕರ್ನಾಟಕದ ಗೆಲುವು ಮುಖ್ಯವಾಗಲಿದೆ. ಇಲ್ಲಿ ಪಕ್ಷ ಜಯಗಳಿಸುವ ವಿಶ್ವಾಸದಲ್ಲಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ತಿಳಿಸಿದರು.
ಒಡಿಶಾ, ಪಶ್ಚಿಮ ಬಂಗಾಳ, ಹಾಗೂ ಕೇರಳದಲ್ಲಿ ಬಿಜೆಪಿ ಜಯ ಗಳಿಸುವವರೆಗೂ ಸುವರ್ಣ ಯುಗ ಆರಂಭವಾಗಲು ಸಾಧ್ಯವಿಲ್ಲ. ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಸುವರ್ಣ ಯುಗ ಪ್ರಾರಂಭವಾಗಲಿದೆ ಎಂದು ಅಮಿತ್ ಶಾ ಹೇಳಿದರು.