ದೇಶ

ಮೇಘಾಲಯ: ಸರ್ಕಾರ ರಚನೆಗೆ ಕಾಂಗ್ರೆಸ್ ಹಕ್ಕೊತ್ತಾಯ

Nagaraja AB

ಶಿಲ್ಲಾಂಗ್ : ಮೇಘಾಲಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು,ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವಂತೆ ರಾಜ್ಯಪಾಲರ ಬಳಿ ಹಕ್ಕೊತ್ತಾಯ ಮಂಡಿಸಿದೆ.

ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್ ಅವರನ್ನು ಭೇಟಿಯಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್ ಹಾಗೂ ಕಮಲ್ ನಾಥ್,  ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸರ್ಕಾರ ರಚನೆಗೆ  ಆಹ್ವಾನಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

60 ವಿಧಾನಸಭಾ ಕ್ಷೇತ್ರದ ಮೇಘಾಲಯ ಚುನಾವಣೆಯಲ್ಲಿ ಕಾಂಗ್ರೆಸ್ 21 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.  ಇತರ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದು, ಸರ್ಕಾರ ರಚಿಸುವ ವಿಶ್ವಾಸದಲ್ಲಿರುವುದಾಗಿ  ಅಹ್ಮದ್ ಪಟೇಲ್ ತಿಳಿಸಿದ್ದಾರೆ.

ರಾಜ್ಯದ ಜನರ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡವರು ತಮ್ಮೊಂದಿಗೆ ಕೈ ಜೋಡಿಸಬಹುದು ಎಂದು ನಿರ್ಗಮಿತ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ತಿಳಿಸಿದ್ದಾರೆ.

ಎಲ್ಲಾ  ಪ್ರಾದೇಶಿಕ ಪಕ್ಷಗಳು  ಸ್ವಂತ ಬಲದ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಬಿಜೆಪಿಯೊಂದಿಗೆ ಆಗಲೀ ಅಥವಾ ಎನ್ ಪಿಪಿಯೊಂದಿಗೆ ಆಗಲೀ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ

SCROLL FOR NEXT