ದೇಶ

'ಆರ್ಥಿಕ ತಜ್ಞ' ಮನಮೋಹನ್ ಸಿಂಗ್ ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತ: ರವಿಶಂಕರ್ ಪ್ರಸಾದ್ ವ್ಯಂಗ್ಯ

Raghavendra Adiga
ನವದೆಹಲಿ: ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಎಲ್ಲಾ ವಿಭಾಗಗಳ ಮೇಲೆ ಕೇಂದ್ರ ಸರ್ಕಾರ ತೀವ್ರತರವಾದ ಹಸ್ತಕ್ಷೇಪ ನಡೆಸಿತ್ತು. ಇದರಿಂದಾಗಿ ಇಂದು ಬ್ಯಾಂಕಿಂಗ್ ಕ್ಷೇತ್ರ ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.
ರವಿಶಂಕರ ಪ್ರಸಾದ್ ಇಂದು ದೆಹಲಿಯ ಬಿಜೆಪಿ ಪಕ್ಷದ ಕೇಂದ್ರ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಆ ವೇಳೆ ಸುದ್ದಿಗಾರರೊಡನೆ ಮಾತನಾಡುತ್ತಾ ಮೇಲಿನ ಹೇಳಿಕೆ ನಿಡಿದ್ದಾರೆ. ತಂತ್ರಜ್ಞಾನವು ಪಾರದರ್ಶಕತೆಯನ್ನು ಹೊಂದಿದ ಸಮಯದಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಅದೊಂದು ಸಮಸ್ಯೆಯಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
"ಇಂದು ರಫೇಲ್ ಒಪ್ಪಂದದ ಕುರಿತಂತೆ ಕಾಂಗ್ರೆಸ್ ಪ್ರಶ್ನೆಗಳನ್ನು ಕೇಳುತ್ತದೆ. ಆದರೆ ಬೋಪೋರ್ಸ್ ಹಗರಣದ ಬ್ರಹ್ಮಾಂಡ ಭ್ರಷ್ಠಾಚಾರದಲ್ಲಿ ಮುಳುಗಿದ ಪಕ್ಷವೊಂದು ರಫೇಲ್ ಒಪ್ಪಂದದ ಕುರಿತಂತೆ ಕೇಳುವುದೇ ಅಚ್ಚರಿಯ ವಿಚಾರವಾಗಿದೆ, ಇಷ್ಟಕ್ಕೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ತನ್ನ ಅಧಿಕಾರಾವಧಿಯಲ್ಲಿ ಈ ಒಪ್ಪಂದವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಿರಲಿಲ್ಲ.
"ನಮ್ಮ ಸರ್ಕಾರದ ಅವಧಿಯಲ್ಲಿ ಇದುವರೆವಿಗೆ ಯಾವುದೇ ಸಾಲವನ್ನು ಎನ್ ಪಿಎಗಾಗಿ ನೀಡಲಾಗಿಲ್ಲ. 2008ರಲ್ಲಿ, ಬ್ಯಾಂಕುಗಳು ಒಟ್ಟು  18.06 ಲಕ್ಷ ಕೋಟಿ ರೂ ಮುಂಗಡ ಹಣವನ್ನು ಜನರಿಗೆ ಸಾಲವಾಗಿ ನೀಡಿದ್ದವು.   2014 ರ ಮಾರ್ಚ್ ವೇಳೆಗೆ ಈ ಮೊತ್ತ 52.15 ಲಕ್ಷ ಕೋಟಿ ರೂ. ಗೆ ತಲುಪಿತ್ತು. ಅದರಲ್ಲಿ ಒಟ್ಟು ಗುರುತಿಸಲಾದ ಆಸ್ತಿಗಳ ಪಾಲು ಕೇವಲ ಶೇ.36ರಷ್ಟಿತ್ತು.ಈಗ ಇದರ ಪ್ರಮಾಣ ಶೇ.82ನ್ನು ತಲುಪಿದೆ. ಇದರರ್ಥವೆಂದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಬ್ಯಾಂಕುಗಳು ಸರಿಯಾದ ದಾಖಲೆಗಳಿಲ್ಲದೆ ಕೋಟಿಗಟ್ಟಲೆ ಸಾಲವನ್ನು ನೀಡಿದ್ದು ದಾಖಲೆಗಳಿಗೆ ಸರಿಯಾದ ಅಂಕಿ ಅಂಶಗಳನ್ನು ಹೊಂದಿಸಲು ಅವುಗಳು ವಿಫಲವಾಗಿದ್ದವು." ಅವರು ಹೇಳಿದರು.
"ಹಿಂದಿನ ಸರ್ಕಾರ ಜಾರಿಗೊಳಿಸಿದ್ದ 80:20 ಯೋಜನೆಯನ್ನು ನಮ್ಮ ಸರ್ಕಾರವು ನವೆಂಬರ್ 2014ರಲ್ಲಿ ರದ್ದು ಮಾಡಿದೆ. 2014ರಲ್ಲಿ ನಡೆದ ಚುನಾವಣಾ ಫಲಿತಾಂಶದ ದಿನ - ಮೇ 16ರಂದು ಆಗಿನ ಯುಪಿಎ ಸರ್ಕಾರದ ಹಣಕಾಸು ಮಂತ್ರಿಗಳು 80:20 ಯೋಜನೆ ಅಡಿಯಲ್ಲಿ 7 ಖಾಸಗಿ ಸಂಸ್ಥೆಗಳಿಗೆ ’ಆಶೀರ್ವಾದ’ ಮಾಡಿದ್ದರು! ಈ ಏಳು ಸಂಸ್ಥೆಗಳಲ್ಲಿ ಮೆಹುಲ್ ಚೋಕ್ಷಿಯ ಗೀತಾಂಜಲಿ ಸಂಸ್ಥೆಯು ಸಹ ಒಂದಾಗಿತ್ತು.
"ಏಳು ಖಾಸಗಿ ಸಂಸ್ಥೆಗಳಿಗೆ ಉಪಯೋಗವಾಗುವಂತೆ ಸರ್ಕಾರ ಕಾರ್ಯಯೋಜನೆಯನ್ನು ರೂಪಿಸಿದ್ದದ್ದೇಕೆ ಎನ್ನುವ ಪ್ರಶ್ನೆಗೆ ಚಿದಂಬರಂ ಹಾಗೂ ರಾಹುಲ್ ಗಾಂಧಿ ಉತ್ತರಿಸಬೇಕಿದೆ. ಸಚಿವರು ಹೇಳಿದರು. 
ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ ಸಚಿವರು ಕಾಂಗ್ರೆಸ್ ಪ್ರಬಲವಾಗಿದ್ದ ಉತ್ತರ ಪ್ರದೇಶ, ಕಾಶ್ಮೀರ, ಹರಿಯಾಣ, ಜಾರ್ಖಂಡ್ ಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇತ್ತೀಚೆಗೆ ನಡೆದ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಸಹ ನಮ್ಮ ಪಕ್ಷ ಜಯ ಗಳಿಸಿದ್ದು ಕಾಂಗ್ರೆಸ್ ಶೂನ್ಯ ಸಂಪಾದಿಸಿದೆ. ನಾಗಾಲ್ಯಾಂಡ್ ನಲ್ಲಿ ಸುಮಾರು ಶೇ.88ರಷ್ಟು ಜನ ಕ್ರೈಸ್ತರಾಗಿದ್ದೂ ಅವರು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರು.
SCROLL FOR NEXT