ಮುಂಬೈ: ವಜ್ರದ ವ್ಯಾಪಾರಿ ನೀರವ್ ಮೋದಿಯ ಬಹುಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಸಿಬಿಐ, ಕಾನೂನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನೀರವ್ ಮೋದಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆ ಕವಿತಾ ಮಾಂಕಿಕರ್ ಹೈಕೋರ್ಟ್ ಮೊರೆ ಹೊಗಿದ್ದು ಸಿಬಿಐ ಅಧಿಕಾರಿಗಳು ಫೆ.20ರ ರಾತ್ರಿ ಎಂಟಕ್ಕೆ ನನ್ನನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರವಾಗಿ ಸೂರ್ಯಾಸ್ತವಾದ ಬಳಿಕ ಮಹಿಳಯನ್ನು ಹೀಗೆ ಬಂಧಿಸುವಂತಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದಾರೆ.
ಮಾಂಕಿಕರ್, ನೀರವ್ ಮೋದಿ ಅವರ ಸಹಾಯಕ ಕಾರ್ಯನಿರ್ವಾಹಕಿಯಾಗಿದ್ದು ಡೈಮಂಡ್ ಆರ್.ಯು.ಎಸ್., ಸ್ಟೆಲ್ಲರ್ ಡೈಮಂಡ್, ಸೋಲಾರ್ ಎಕ್ಸ್ಪೋರ್ಟ್ ಈ ಮೂರು ಸಂಸ್ಥೆಗಳ ನಿರ್ವಹಣೆಗಾಗಿ ಸಹಿ ಹಾಕಿದ್ದರು.
ನೀರವ್ ಮೋದಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಫೈವ್ ಸ್ಟಾರ್ ಡೈಮಂಡ್ ಅಧ್ಯಕ್ಷ ವಿಪುಲ್ ಅಂಬಾನಿ ಸೇರಿ ಇತರೆ ಐವರು ಆರೋಪಿಗಳನ್ನು ಬಂಧಿಸಿದ್ದ ಸಿಬಿಐ ಅಧಿಕಾರಿಗಳು ಅದೇ ವೇಳೆ ಮಾಂಕಿಕರ್ ಅವರನ್ನೂ ಬಂಧಿಸಿ ವಶಕ್ಕೆ ಪಡೆದಿದ್ದರು. ಅಂದಿನಿಂದ ಇಂದಿನವರೆಗೆ ಮಾಂಕಿಕರ್ ಸಿಬಿಐ ವಶದಲ್ಲಿದ್ದಾರೆ.
ಮಾಂಕಿಕರ್ ಅವರ ಪರ ವಕೀಲರಾದ ವಿಜಯ್ ಅಗರ್ವಾಲ್ ಹೇಳುವಂತೆ ಮಾಂಕಿಕರ್ ಅವರ ಬಂಧನ ಕಾನೂನುಬಾಹಿರವಾಗಿದೆ, ಇದು ಅಸಾಂವಿಧಾನಿಕವಾಗಿದ್ದು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅವರು ಹೈಕೋರ್ಟ್ ಗೆ ಮೊರೆ ಇಟ್ಟಿದ್ದಾರೆ.
ನ್ಯಾಯಮೂರ್ತಿ ಎಸ್.ಡಬ್ಲ್ಯು. ಸಂಬ್ರೆ ಅವರಿದ್ದ ಏಕಸದಸ್ಯ ಪೀಠದಲ್ಲಿ ಈ ಅರ್ಜಿ ವಿಚಾರಣೆಗೆ ಬರಲಿದೆ. ಮಾ.12ರಂದು ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಮಾಂಕಿಕರ್ ಅವರು ತಿಳುವಳಿಕೆ ಪತ್ರ(ಎಲ್.ಒಯು) ಗಳಿಗೆ ಮೋಸದ ಸಹಿಗಳನ್ನು ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ..