ದೇಶ

ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡಬೇಡಿ: ಬಿಜೆಪಿ ಸಚಿವರಿಗೆ ಸಿಎಂ ಚಂದ್ರಬಾಬು ನಾಯ್ಡು ಮನವಿ

Manjula VN
ಅಮರಾವತಿ: ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ವಿವಾದಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದ ಇಬ್ಬರು ಬಿಜೆಪಿ ಸಚಿವರು ಸಂಪುಟದಿಂದ ಹೊರ ನಡೆಯದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ ಮನವಿ ಮಾಡಿಕೊಂಡಿದ್ದಾರೆ. 
ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿರುವ ಚಂದ್ರಬಾಬು ನಾಯ್ಡು ಅವರು, ಆರೋಗ್ಯ ಹಾಗೂ ದತ್ತಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಕಮಿನೇನಿ ಶ್ರೀನಿವಾಸ್ ಹಾಗೂ ಪೈದಿಕೊಂಡಲ ಮಾಣಿಕ್ಯಾಲ ರಾವ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 
ಕೇಂದ್ರ ಸಂಪುಟದಲ್ಲಿರುವ ನಮ್ಮ ಸಚಿವರು ಹಾಗೂ ರಾಜ್ಯ ಸಂಪುಟದಲ್ಲಿರುವ ಬಿಜೆಪಿ ಸಚಿವರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡಿದ್ದಾರೆ. ಈ ಸಚಿವರು ರಾಜ್ಯಕ್ಕಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆಂದು ತಿಳಿಸಿದ್ದಾರೆ. 
ರಾಜ್ಯದ ಜನತೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕಿದೆ. ನಿಮ್ಮ ಸೈದ್ಧಾಂತಿಕ ನಿಲುವನ್ನು ಬದಲಿಸಿಕೊಳ್ಳಿ ಎಂದು ನಾನು ಕೇಳುವುದಿಲ್ಲ. ಆದರೆ, ರಾಜ್ಯದ ಬಗ್ಗೆ ಆಲೋಚಿಸಿ ಮತ್ತು ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಕೆಲಸ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಪ್ರಸ್ತುತ ರಾಜ್ಯ ಸಂಪುಟಕ್ಕೆ ಇಬ್ಬರು ಬಿಜೆಪಿ ಸಚಿವರು ರಾಜೀನಾಮೆ ನೀಡಿದ್ದು, ಇಬ್ಬರೂ ಸಚಿವರೂ ತಮ್ಮ ತಮ್ಮ ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಕಲ್ಯಾಣಕ್ಕಾಗಿ ತಮ್ಮ ಕೆಲಸವನ್ನು ಮುಂದುವರೆಸುವಂತೆ ಸಚಿವರ ಬಳಿ ಮನವಿ ಮಾಡಿಕೊಳ್ಳುತ್ತೇನೆಂದಿದ್ದಾರೆ. 
ಬಳಿಕ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಕಿಡಿಕಾರಿರುವ ಅವರು, ಕೇಂದ್ರ ಸಚಿವ ಆಂಧ್ರಪ್ರದೇಶ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ಜೇಟ್ಲಿಯವರು ನಿನ್ನೆ ಮಾತನಾಡಿದ್ದ ಸರಿಯಲ್ಲ. ರಾಜ್ಯ ವಿಭಜನೆ ಸಂದರ್ಭದಲ್ಲಿ ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದ್ದು ಬಿಜೆಪಿ. ಆಂಧ್ರಪ್ರದೇಶದ ರಾಜ್ಯ ಸಮಸ್ತೆಯಗಳ ಕುರಿತು ರಾಜ್ಯಸಭೆಯಲ್ಲಿ ವೆಂಕಯ್ಯ ನಾಯ್ಡು ಕೇಳಿದ್ದರು. ರಾಜ್ಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿತ್ತು. ಇಂತಹ ಸಂದರ್ಭದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರಕ್ಕೆ ಬೆಂಬಲ ನೀಡುವುದು ಉತ್ತಮವೆಂದು ನಾವು ತಿಳಿದಿದ್ದೆವು. ಹೀಗಾಗಿಯೇ ಬಿಜೆಪಿಯೊಂದಿಗೆ ಕೈಜೋಡಿಸಿದ್ದೆವು. 
ಈಶಾನ್ಯ ರಾಜ್ಯಗಳಿಗೆ ಬೆಂಬಲ ನೀಡುತ್ತಿರುವ ನೀವು, ಆಂಧ್ರಪ್ರದೇಶಕ್ಕೆ ನೀಡುತ್ತಿಲ್ಲ. ಈಶಾನ್ಯ ರಾಜ್ಯಗಳಿಗೆ ಕೈಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದೀರಿ. ಆದರೆ, ಆಂಧ್ರಪ್ರದೇಶಕ್ಕೆ ನೀಡುತ್ತಿಲ್ಲ. ಈ ರೀತಿಯ ತಾರತಮ್ಯವೇಕೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. 
SCROLL FOR NEXT