ಅಮರಾವತಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ತೆಲುಗು ದೇಶಂ ಪಕ್ಷ ನಡೆಸುತ್ತಿರುವ ಪ್ರತಿಭಟನೆ ನಿರ್ಣಾಯಕ ಹಂತ ತಲುಪಿದ್ದು, ಇದೀಗ ಟಿಡಿಪಿಯ ಇಬ್ಬರು ಕೇಂದ್ರ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಈ ಹಿಂದೆ ಆಂಧ್ರ ಪ್ರದೇಶಕ್ಕಾಗಿ ವಿಶೇಷ ಸ್ಥಾನಮಾನ ಆಗ್ರಹಸಿದ್ದ ಟಿಡಿಪಿ ಎನ್ ಡಿಎ ಮೈತ್ರಿಕೂಟದಿಂದ ಹೊರಹೋಗುವ ಬೆದರಿಕೆ ಹಾಕಿತ್ತು. ಇದರ ಮೊದಲ ಭಾಗ ಎಂಬಂತೆ ಇದೀಗ ತನ್ನ ಇಬ್ಬರು ಸಂಸದರಿಗೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. ಆಂಧ್ರ ಪ್ರದೇಶ ಸಿಎಂ ಹಾಗೂ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಆದೇಶದ ಮೇರೆಗೆ ಇಬ್ಬರು ಆಂಧ್ರ ಪ್ರದೇಶ ಸಂಸದರು ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು, ಈ ವಿಚಾರ ಸಂಬಂಧ ಸಾಕಷ್ಟು ಬಾರಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ಭೇಟಿಯಾಗೆ ಅವಕಾಶ ನೀಡಿರಲಿಲ್ಲ. ಸಂಸತ್ ನ ಉಭಯ ಸದನಗಳಲ್ಲೂ ನಮ್ಮ ಸಂಸದರು ಈ ಬಗ್ಗೆ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಿದೆವು. ಆದರೆ ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂಧಿಸುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೇಂದ್ರಕ್ಕೆ ನೀಡಿರುನ ನಮ್ಮ ಬೆಂಬಲವನ್ನು ವಾಪಸ್ ಪಡೆಯಲು ಮುಂದಾಗಿದ್ದೇವೆ, ಕನಿಷ್ಠ ಪಕ್ಷ ಈಗಾಲಾದರೂ ಕೇಂದ್ರ ಸರ್ಕಾರಕ್ಕೆ ನಮ್ಮ ಭಾವನೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಅದು ಸಾಧ್ಯವಾಗಿಲ್ಲ ಎಂದರೆ ನಮ್ಮ ಮುಂದಿನ ನಡೆ ಇನ್ನಷ್ಟು ಕಠಿಣವಾಗಿರುತ್ತದೆ ಎಂದು ಚಂದ್ರಬಾಬು ನಾಯ್ಜು ಅವರು ಹೇಳಿದ್ದಾರೆ.