ಮುಂಬೈ: ಅಂಕಣಗಾರ್ತಿ, ಲೇಖಕಿ ಶೋಭಾ ಡೇ ಅವರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅವಮಾನಕ್ಕೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗಾವತ್ ಶೋಭಾ ಡೇ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ...
ಅರೇ ಇದೇನಿದು ಅಪಮಾನತ್ತೀಡಾದರೂ ಥ್ಯಾಂಕ್ಸ್ ಯಾಕೆ ಹೇಳಿದರು ಎಂದು ಭಾವಿಸಬೇಡಿ.. ಕಾರಣ ಇದೆ. ಶೋಭಾ ಡೇ ಅವರು ಅಂದು ಮಾಡಿದ್ದ ಅಪಮಾನಕಾರಿ ಟ್ವೀಟ್ ನಿಂದಾಗಿ ಇಂದು ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗಾವತ್ ಬರೊಬ್ಬರಿ 65 ಕೆಜಿ ತೂಕ ಇಳಿಸಿಕೊಂಡು ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಜೋಗಾವತ್ ಅವರ ಫೋಟೋವನ್ನ ಟ್ವಿಟ್ಟರ್‍ನಲ್ಲಿ ಹಾಕಿದ್ದ ಶೋಭಾ ಡೇ, ಮುಂಬೈನಲ್ಲಿ ಭಾರೀ ಬಂದೋಬಸ್ತ್ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಮುಂಬೈ ಪೊಲೀಸರು ತಿರುಗೇಟು ಕೊಟ್ಟು, ಇವರು ಮುಂಬೈ ಪೊಲೀಸ್ ಸಿಬ್ಬಂದಿ ಅಲ್ಲ. ನಿಮ್ಮಂತಹ ಜವಾಬ್ದಾರಿಯುತ ಪ್ರಜೆಯಿಂದ ನಾವು ಉತ್ತಮವಾದುದನ್ನು ನಿರೀಕ್ಷಿಸುತ್ತೆವೆ ಎಂದು ಟ್ವೀಟ್ ಮಾಡಿದ್ದರು. ಚಿತ್ರದಲ್ಲಿದ್ದ ವ್ಯಕ್ತಿ ಮಧ್ಯಪ್ರದೇಶದ ಪೊಲೀಸ್ ಸಿಬ್ಬಂದಿ ಜೋಗಾವತ್ ಎಂದು ತಿಳಿದುಬಂದಿತ್ತು. ಶೋಭಾ ಡೇ ಅವರ ವ್ಯಂಗ್ಯ ಟ್ವೀಟ್ ಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು.
ನಂತರ ಕ್ಷಮೆ ಕೇಳಿದ್ದ ಶೋಭಾ ಡೇ, ಮಹಾರಾಷ್ಟ್ರ ಪೊಲೀಸರೇ ಅವಮಾನಿಸುವ ಉದ್ದೇಶ ನನಗಿಲ್ಲ. ಮಧ್ಯಪ್ರದೇಶ ಪೊಲೀಸ್ ಇದು ನೈಜ ಫೋಟೋ ಆಗಿದ್ದರೆ ಬೇಗ ವೈದ್ಯರನ್ನ ಭೇಟಿ ಮಾಡಿ. ಫೋಟೋಶಾಪ್ ಮಾಡಿರೋ ಚಿತ್ರ ಹರಿದಾಡ್ತಿರಬಹುದು ಎಂದಿದ್ದರು.
ಇದರಿಂದ ಮನನೊಂದಿದ್ದ ಜೋಗಾವತ್, ನನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನೋಡಿ ಬೇಸರವಾಗಿದೆ ಎಂದಿದ್ದರು. ನಾನು ಚಿಕ್ಕಂದಿನಿಂದಲೂ ಹೀಗೆ ದಢೂತಿ ದೇಹ ಹೊಂದಿಲ್ಲ. ಆಪರೇಷನ್ ನಂತರ ತೂಕ ಹೆಚ್ಚಾಯಿತು ಎಂದು ಹೇಳಿದ್ದರು. ಜೋಗಾವತ್ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ನೋಡಿದ್ದ ಸೈಫೀ ಆಸ್ಪತ್ರೆಯ ಪ್ರಖ್ಯಾತ ಬೇರಿಯಾಟ್ರಿಕ್ ಸರ್ಜನ್ ಡಾ. ಮುಫಾಜಲ್ ವಕ್ಡಾವಾಲಾ, ಜೋಗಾವತ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದೆ ಬಂದಿದ್ದರು. ಆಗ 180 ಕೆಜಿ ತೂಕವಿದ್ದ ಜೋಗಾವತ್ ಇದೀಗ ಬರೋಬ್ಬರಿ 65 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೋಗಾವತ್, "ನನಗೆ ಶೋಭಾ ಡೇ ಮೇಲೆ ಈಗ ಕೋಪ ಇಲ್ಲ. ವೈಯಕ್ತಿಕವಾಗಿ ಶೋಭಾ ಡೇ ಅವರಿಗೆ ಧನ್ಯವಾದ ತಿಳಿಸಲು ಇಚ್ಛಿಸಿದ್ದಾರೆ ಎನ್ನಲಾಗಿದೆ. ಇನ್ನು ಜೋಗಾವತ್ ಅವರ ತೂಕ ಇಳಿಕೆ ಬಗ್ಗೆ ಸುದ್ದಿ ಕೇಳಿ ಶುಕ್ರವಾರದಂದು ಟ್ವೀಟ್ ಮಾಡಿರೋ ಶೋಭಾ ಡೇ, ಎಲ್ಲಾ ಸುಖಾಂತ್ಯವಾಯಿತೆಲ್ಲಾ ಎಂಬುದು ಖುಷಿ. ದೌಲತ್‍ರಾಮ್ ಅವರಿಗೆ ದೇವರು ಒಳ್ಳೆಯದು ಮಾಡಲಿ. ದೀರ್ಘ ಆಯಸ್ಸು ಹಾಗೂ ಆರೋಗ್ಯ ಕೊಡಲಿ ಎಂದು ಟ್ವೀಟ್ ಮಾಡಿದ್ದಾರೆ.\