ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ
ನವದೆಹಲಿ: 2019ರ ಲೋಕಸಭಾ ಕದನಕಕ್ಕೆ ಭಾರೀ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್, ಕೇಂದ್ರದಲ್ಲಿ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವನ್ನು ಕೆಳಗಿಳಿಸಲು ಭಾರೀ ತಂತ್ರಗಳನ್ನು ರೂಪಿಸುತ್ತಿದೆ.
ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಮೋದಿ ಸರ್ಕಾರವನ್ನು ಮಣಿಸಲು ಮುಂದಾಗಿದ್ದಾರೆ. ಸಂಸತ್ತಿನ ಅಧಿವೇಶನದಲ್ಲಿ ಒಗ್ಗೂಡಿದ್ದ ವಿರೋಧ ಪಕ್ಷಗಳು, ಅಧಿವೇಶನದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಹಾಗೂ ಇನ್ನಿತರೆ ವಿಚಾರಗಳನ್ನು ಹಿಡಿದು ಭಾರೀ ಗದ್ದಲವನ್ನುಂಟು ಮಾಡಿದ್ದು ಇದಕ್ಕೆ ಮತ್ತಷ್ಟು ಇಂಬು ನೀಡುತ್ತಿದೆ.
ಪ್ರಧಾನಿ ಮೋದಿಯವರನ್ನು ಮಣಿಸಲು ಪಟ್ಟು ಹಿಡಿದಿರುವ ಸೋನಿಯಾ ಗಾಂಧಿಯವರು ಇದಲ್ಲದೆ, ವಿರೋಧ ಪಕ್ಷಗಳ ಬಲವನ್ನು ಮತ್ತಷ್ಟು ಹೆಚ್ಚು ಮಾಡುವ ಸಲುವಾಗಿ ವಿರೋಧ ಪಕ್ಷಗಳ ನಾಯಕರಿಗಾಗಿ ಔತಣಕೂಟವನ್ನು ಏರ್ಪಡಿಸಿ, ಆಹ್ವಾನ ನೀಡಿದ್ದಾರೆ.
ಫೆಬ್ರವರಿ 1 ರಂದು ಸೋನಿಯಾ ಗಾಂಧಿಯವರು ಕರೆದಿದ್ದ ಸಭೆಗೆ ಒಟ್ಟು 17 ಪಕ್ಷಗಳು ಭಾಗಿಯಾಗಿದ್ದವು. ಈ ಎಲ್ಲಾ ಪಕ್ಷಗಳ ನಾಯಕರನ್ನೂ ಇದೀಗ ಔತಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.
ಸೋನಿಯಾ ಗಾಂಧಿಯವರು ಆಹ್ವಾನ ನೀಡಿರುವ ಈ ಔತಣಕೂಟಕ್ಕೆ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಭಾಗಿಯಾಗಲಿದ್ದಾರೆ. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಮ್ಮ ಬದಲಿಗೆ ಸುದೀಪ್ ಬಂಡೋಪಾದ್ಯಾಯ ಅವರನ್ನು ಕಳುಹಿಸಲು ನಿರ್ಧರಿಸಿದ್ದಾರೆಂದು ವರದಿಗಳು ತಿಳಿಸಿವೆ.
ಇದಲ್ಲದೆ, ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಹಾಗೂ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರಿಗೂ ಕರೆ ಮಾಡಿರುವ ಸೋನಿಯಾ ಅವರು ಔತಣಕೂಟಕ್ಕೆ ಆಹ್ವಾನ ನೀಡಿದ್ದಾರನ್ನೆಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos