ನವದೆಹಲಿ: ಟೆಲಿಫೋನ್ ಎಕ್ಸ್ ಚೇಂಜ್ ಹಗರಣದ ಆರೋಪ ಎದುರಿಸುತ್ತಿದ್ದ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಲಾನಿಧಿ ಮಾರನ್ ಸಹೋದರರನ್ನು ಸಿಬಿಐ ನ ವಿಶೇಷ ಕೋರ್ಟ್ ದೋಷಮುಕ್ತಗೊಳಿಸಿದೆ.
ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಅಪರಾಧ ಸಾಬೀತಾಗುವ ಸಾಕ್ಷ್ಯಗಳು ಇಲ್ಲದ ಕಾರಣ ವಿಶೇಷ ಕೋರ್ಟ್ ನ ನ್ಯಾಯಮೂರ್ತಿ ನಟರಾಜನ್ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದಾರೆ. 2018 ರ ಫೆಬ್ರವರಿ ತಿಂಗಳಲ್ಲಿ ದಯಾನಿಧಿ ಮಾರನ್, ಕಲಾನಿಧಿ ಮಾರನ್ ತಮ್ಮನ್ನು ಪ್ರಕರಣದಿಂದ ವಜಾಗೊಳಿಸಬೇಕೆಂದು ಕೋರಿದ್ದ ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿತ್ತು.
ಮಾರನ್ ಸಹೋದರರ ವಿರುದ್ಧ, ಸನ್ ಟಿವಿ ಡಾಟಾಗೆ ಅಕ್ರಮವಾಗಿ ಅಪ್ ಲಿಂಕ್ ಕಲ್ಪಿಸಲು 764 ಟೆಲಿಫೋನ್ ಲೈನ್ ಗಳನ್ನು ದುರ್ಬಳಕೆ ಮಾಡಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಗೆ 1.78 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದ ಆರೋಪ ಕೇಳಿಬಂದಿತ್ತು.