ದೇಶ

ನನ್ನ ನಿರ್ಧಾರಕ್ಕೆ ಉಪ ಚುನಾವಣೆ ಫಲಿತಾಂಶ ಸಮರ್ಥನೀಯವಾಗಿದೆ: ಶರದ್ ಯಾದವ್

Srinivasamurthy VN
ಪಾಟ್ನಾ: ಈ ಹಿಂದೆ ನಾನು ಕೈಗೊಂಡಿದ್ದ ನಿರ್ಧಾರಕ್ಕೆ ಹಾಲಿ ಉಪ ಚುನಾವಣಾ ಫಲಿತಾಂಶ ಸಮರ್ಥನೀಯವಾಗಿದೆ ಎಂದು ಉಚ್ಛಾಟಿತ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರು ಹೇಳಿದ್ದಾರೆ.
ಬಿಹಾರ ಉಪ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ  ಮಾಧ್ಯಮಗಳಿಗೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶರದ್ ಯಾದವ್ ಅವರು, ಈ ಹಿಂದೆ ನಾನು ಕೈಗೊಂಡಿದ್ದ ನಿರ್ಧಾರಕ್ಕೆ ಹಾಲಿ ಉಪ ಚುನಾವಣಾ ಫಲಿತಾಂಶ ಸಮರ್ಥನೀಯವಾಗಿದೆ ಎಂದು ಹೇಳಿದ್ದಾರೆ. ಫಲಿತಾಂಶ ಬಿಜೆಪಿ ಸಖ್ಯ ತೊರೆದ ನನ್ನ ನಿರ್ಧಾರ ಸೂಕ್ತವಾಗಿತ್ತು ಎಂಬುದನ್ನು ತೋರಿಸುತ್ತಿದ್ದು, ವಿಪಕ್ಷಗಳ ಏಕತೆಗೆ ಸಂದ ಗೆಲುವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಮಹಾಘಟ್ ಬಂಧನ್ ಮೈತ್ರಿಕೂಟದ ಮೇಲೆ ಜನತೆ ಇಟ್ಟಿರುವ ವಿಶ್ವಾಸಕ್ಕೆ ಇದು ಪ್ರತೀಕವಾಗಿದ್ದು, ಕೇಂದ್ರದಲ್ಲಿ ಬದಲಾವಣೆ ಬಯಸಿದ್ದ ಜನ ಬಿಜೆಪಿಗೆ ಮತ ನೀಡುವ ಮೂಲಕ ತಾವು ಎಂತಹ ದೊಡ್ಡಪ್ರಮಾದ ಮಾಡಿದೆವು ಎಂದು ಪಶ್ಥಾತಾಪ ಪಡುವಂತಾಗಿತ್ತು. ಇದರ ಪರಿಣಾಮ ಇದೀಗ ಉಪ ಚುನಾವಣೆಯಲ್ಲಿ ಬಿಂಬಿತವಾಗಿದೆ ಎಂದು ಶರದ್ ಯಾದವ್ ಹೇಳಿದ್ದಾರೆ.
ಇನ್ನು ಇಂದು ಪ್ರಕಟಗೊಂಡ ಉತ್ತರ ಪ್ರದೇಶ ಹಾಗೂ ಬಿಹಾರ ಉಪ ಚುನಾವಣೆಯಲ್ಲಿ ಆಡಳಿತಾ ರೂಢ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, 2019ರ ಲೋಕಸಭಾ ಚುನವಣೆಗೆ ದಿಕ್ಸೂಚಿ ಎಂದು ಹೇಳಲಾಗುತ್ತಿದ್ದ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ. ಉತ್ತರ ಪ್ರದೇಶದ ಗೋರಖ್ ಪುರ ಹಾಗೂ ಫುಲ್ಪುರ ಲೋಕಸಭಾ ಕ್ಷೇತ್ರಗಳು ಎಸ್ ಪಿ ಪಾಲಾಗಿದ್ದು, ಇತ್ತ ಅರಾರಿಯಾ ಲೋಕಸಭಾ ಕ್ಷೇತ್ರ ಹಾಗೂ ಜೆಹನ್ ಬಾದ್ ವಿಧಾನಸಭಾ ಕ್ಷೇತ್ರ ಆರ್ ಜೆಡಿ ಪಾಲಾಗಿದೆ. ಬಬುವಾ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ.
SCROLL FOR NEXT