ದೇಶ

ಎಸ್ ಎಸ್ ಸಿ ಪ್ರಶ್ನೆಪತ್ರಿಕೆ ಸೋರಿಕೆ: ಸಿಬಿಐನಿಂದ ಪ್ರಾಥಮಿಕ ತನಿಖೆ ದಾಖಲು

Nagaraja AB

ನವದೆಹಲಿ: ಇತ್ತೀಚಿಗೆ ನಡೆದ ಸಿಬ್ಬಂದಿ ಆಯ್ಕೆ ಆಯೋಗ -ಎಸ್ ಎಸ್ ಸಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಾಥಮಿಕ ತನಿಖೆಯನ್ನು ದಾಖಲಿಸಿಕೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೇಂದ್ರಸರ್ಕಾರವನ್ನು ಒತ್ತಾಯಿಸಿದರು. ಸಿಬಿಐ ತನಿಖೆಗೆ ಕೇಂದ್ರಸರ್ಕಾರ ಒಪ್ಪಿಕೊಂಡಿತ್ತು.

ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳ ಬೇಡಿಕೆಯನ್ನು ಒಪ್ಪಿಕೊಂಡಿದ್ದು, ಸಿಬಿಐ ತನಿಖೆಗೆ ಆದೇಶ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 12 ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.

ಸಾಮೂಹಿಕ ನಕಲಿ ವಿರುದ್ಧ ಫೆಬ್ರವರಿ 27 ರಂದು ದೆಹಲಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಸಂಸದ ಮನೋಜ್ ತಿವಾರಿ ಕೂಡಾ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಂತ್ರಿಕ ಕಾರಣದಿಂದ ಫೆಬ್ರವರಿ 21 ರಂದು ನಡೆಯಬೇಕಿದ್ದ ಪರೀಕ್ಷೆ ರದ್ದುಗೊಂಡಿದ್ದು, ಮಾರ್ಚ್ 9 ರಂದು ನಡೆಸುವುದಾಗಿ ಎಸ್ ಎಸ್ ಸಿ ಫೆಬ್ರವರಿ 24 ರಂದು ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು.









SCROLL FOR NEXT