ದೇಶ

ಉತ್ತರ ಪ್ರದೇಶ, ಬಿಹಾರ ಉಪ ಚುನಾವಣೆ: ಎಸ್ಪಿ, ಆರ್ ಜೆಡಿ ಭರ್ಜರಿ ಗೆಲುವು, ಬಿಜೆಪಿಗೆ ಮುಖಭಂಗ

Lingaraj Badiger
ಲಖನೌ/ಪಾಟ್ನಾ: ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳು ಮತ್ತು ಬಿಹಾರದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಸಮಾಜವಾದಿ ಪಕ್ಷ ಮತ್ತು ಆರ್ ಜೆಡಿ ಭರ್ಜರಿ ಗೆಲುವು ಸಾಧಿಸಿವೆ. ಆಡಳಿತರೂಢ ಬಿಜೆಪಿ ಎರಡೂ ರಾಜ್ಯಗಳಲ್ಲೂ ತೀವ್ರ ಮುಖಭಂಗ ಅನುಭವಿಸಿದೆ.
ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳಲ್ಲೂ ಆಡಳಿತರೂಢ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಐದು ಬಾರಿ ಪ್ರತಿನಿಧಿಸಿದ್ದ ಗೋರಖ್ ಪುರದಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಶಾದ್ ಅವರು 21,881 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಉಪೇಂದ್ರ ದತ್ ಶುಕ್ಲಾ ಅವರು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. 
ಫಲ್ಪುರ್ ಲೋಕಸಭಾ ಕ್ಷೇತ್ರದಲ್ಲೂ ಸಮಾಜವಾದಿ ಪಕ್ಷದ ಅಭ್ಯರ್ಥಿ ನಾಗೇಂದ್ರ ಪ್ರತಾಪ್ ಅವರು ಬಿಜೆಪಿ ಅಭ್ಯರ್ಥಿ ಕೌಶಲೇಂದ್ರ ಸಿಂಗ್ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉಪ ಮುಖ್ಯಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಂದ ತೆರವಾಗಿದ್ದ ಗೋರಖ್ ಪುರ್ ಮತ್ತು ಫುಲ್ಪುರ್ ಲೋಕಸಭಾ ಸ್ಥಾನಗಳಿಗೆ ಕಳೆದ ಭಾನುವಾರ ಉಪ ಚುನಾವಣೆ ನಡೆದಿತ್ತು.
ಇನ್ನು ಬಿಹಾರದ ಅರೆರಿಯಾ ಲೋಕಸಭಾ ಕ್ಷೇತ್ರದಲ್ಲಿ ಆರ್ ಜೆಡಿ ಅಭ್ಯರ್ಥಿ ಸರ್ಫರಾಜ್ ಅಲಂ ಅವರು ಬಿಜೆಪಿ ಅಭ್ಯರ್ಥಿ ಪ್ರದೀಪ್ ಸಿಂಗ್ ವಿರುದ್ಧ 63 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.  
ಬಿಹಾರದ ಜೆಹಾನಾಬಾದ್ ವಿಧಾನಸಭಾ ಕ್ಷೇತ್ರದಲ್ಲೂ ಆರ್'ಜೆಡಿ ಗೆಲುವು ಸಾಧಿಸಿದ್ದು, ಭಬುವಾ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯ ಗಳಿಸಿದೆ.
SCROLL FOR NEXT