ಪ್ರಧಾನಿ ಮೋದಿ - ಚಂದ್ರಬಾಬು ನಾಯ್ಡು
ನವದೆಹಲಿ: ತೆಲುಗು ದೇಶಂ ಪಾರ್ಟಿ(ಟಿಡಿಪಿ) ಬಿಜೆಪಿ ನೇತೃತ್ವಗ ಎನ್ ಡಿಎ ಮೈತ್ರಿಕೂಟದಿಂದ ಶುಕ್ರವಾರ ಅಧಿಕೃತವಾಗಿ ಹೊರ ಬರಲು ನಿರ್ಧರಿಸಿದ್ದು, ನಾಳೆ ಮೋದಿ ಸರ್ಕಾರದ ವಿರುದ್ಧ ವೈಎಸ್ ಆರ್ ಕಾಂಗ್ರೆಸ್ ಸಂಸತ್ತಿನಲ್ಲಿ ಮಂಡಿಸುತ್ತಿರುವ ಅವಿಶ್ವಾಸ ನಿರ್ಣಯಕ್ಕೂ ಬೆಂಬಲ ನೀಡಲು ಮುಂದಾಗಿದೆ.
ಎನ್ ಡಿಎ ಮೈತ್ರಿಕೂಟದಿಂದ ಹೊರ ಬರುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ನಾಳೆ ಪಕ್ಷದ ಸಂಸದೀಯ ಮಂಡಳಿ ಸಭೆ ಕರೆದಿದ್ದಾರೆ.
ಮೂಲಗಳ ಪ್ರಕಾರ, ಟಿಡಿಪಿಯ ಬಹುತೇಕ ಸಂಸದರು ಮತ್ತು ಶಾಸಕರು ಹಾಗೂ ಹಿರಿಯ ನಾಯಕರು ಎನ್ ಡಿಎದಿಂದ ಹೊರ ಬರುವಂತೆ ನಾಯ್ಡುಗೆ ಸಲಹೆ ನೀಡಿದ್ದಾರೆ ಮತ್ತು ಇದೇ ಅಂತಿಮ ಎನ್ನಲಾಗಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದರೆ, ಬಿಜೆಪಿ ತಮಿಳುನಾಡು ರೀತಿಯಲ್ಲಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಟಿಡಿಪಿ ನಾಯಕ ಕಂಭಂಪತಿ ರಾಮಮೋಹನ್ ರಾವ್ ಅವರು ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವೈಎಸ್ ಆರ್ ಕಾಂಗ್ರೆಸ್ ಹಾಗೂ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವನ್ನು ಬಳಸಿಕೊಂಡು ತಮ್ಮನ್ನು ಮತ್ತು ಟಿಡಿಪಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನಾಯ್ಡು ಅವರು ಇಂದು ಪಕ್ಷದ ಸಂಸದರೊಂದಿಗೆ ನಡೆಸಿದ ಟೆಲಿಕಾನ್ಫರೆನ್ಸ್ ವೇಳೆ ದೂರಿದ್ದಾರೆ.
ಮೋದಿ ಅವರು ತಮಿಳುನಾಡಿನಲ್ಲಿ ಎಐಎಡಿಎಂಕೆಯಲ್ಲಿ ಇಪಿಎಸ್ ಬಣದ ವಿರುದ್ಧ ಒಪಿಎಸ್ ಬಣ ಎತ್ತಿಕಟ್ಟಿ ಬೆಂಬಲಿಸಿದ ತಂತ್ರವನ್ನೇ ಆಂಧ್ರದಲ್ಲೂ ಬಳಸುತ್ತಿದ್ದಾರೆ ಎಂದು ನಾಯ್ಡು ಡಿಟಿಪಿ ಸಂಸದರಿಗೆ ತಿಳಿಸಿದ್ದಾರೆ.
ಟೆಲಿಕಾನ್ಫರೆನ್ಸ್ ವೇಳೆ ಉತ್ತರ ಪ್ರದೇಶ ಉಪ ಚುನಾವಣೆಯ ಫಲಿತಾಂಶವನ್ನು ಪ್ರಸ್ತಾಪಿಸಿದ ಆಂಧ್ರ ಸಿಎಂ, ಅಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಮತ್ತು ಮೋದಿ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಅಗತ್ಯ ಬಿದ್ದರೆ ನಾಳೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವೈಎಸ್ ಆರ್ ಕಾಂಗ್ರೆಸ್ ಮಂಡಿಸಲಿರುವ ಅವಿಶ್ವಾಸ ನಿರ್ಣಯ ಬೆಂಬಲಿಸುವುದಾಗಿ ಚಂದ್ರಬಾಬು ನಾಯ್ಡು ಅವರು ಇಂದು ಆಂಧ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ, ವೈಎಸ್ ಆರ್ ಕಾಂಗ್ರೆಸ್, ಮೋದಿ ಸರ್ಕಾರದ ವಿರುದ್ಧ ತಾನು ಮಂಡಿಸುತ್ತಿರುವ ಅವಿಶ್ವಾಸ ನಿರ್ಣಯ ಬೆಂಬಲಿಸುವಂತೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಸಿಪಿಐಎಂನ ಸೀತಾರಾಮ್ ಯೆಚೂರಿ ಸೇರಿದಂತೆ ಇತರೆ ಪಕ್ಷಗಳ ನಾಯಕರಿಗೆ ಮನವಿ ಮಾಡಿದೆ.