ದೇಶ

ರಾಜಕೀಯ ಪಕ್ಷಗಳಿಗೆ ದೇಣಿಗೆ: 222 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾರಾಟ

Raghavendra Adiga
ನವದೆಹಲಿ: ಮಾರ್ಚ್ ತಿಂಗಳ ಪ್ರಾರಂಭದಿಂದ ಹತ್ತು ದಿನಗಳ ಕಾಲ ಒಟ್ಟು 222 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳು ಮಾರಾಟವಾಗಿದೆ. 
ಚುನಾವಣಾ ಬಾಂಡ್ ಮಾರಾಟ ಯೋಜನೆಯ ಮೊದಲ ಹಂತದಲ್ಲಿ ಒಟ್ಟು 2.22 ಬಿಲಿಯನ್ ರೂ. ಸಂಗ್ರಹವಾಗಿದೆ.ಮಾರ್ಚ್ 9, 2018ರವರೆಗಿನ ದಾಖಲೆಗಳ ಅನುಸಾರವಾಗಿ ಇಷ್ಟು ಮೊತ್ತದ ಬಾಂಡ್ ಗಳು ಮಾರಾಟಗೊಂಡಿದೆ" ಎಂದು ಹಣಕಾಸು ಇಲಾಖೆ ರಾಜ್ಯ ಸಚಿವ ಪಿ. ರಾಧಾಕೃಷ್ಣನ್ ಶುಕ್ರವಾರದ ಲೋಕಸಭಾ ಕಲಾಪದಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಕೇಂದ್ರ ಬಜೆಟ್ 2017-18ರಲ್ಲಿ ಈ ಚುನಾವಣಾ ಬಾಂಡ್ ಗಳ ಯೋಜನೆಯನ್ನು ಪರಿಚಯಿಸಿದ್ದರು. ರಾಜಕೀಯ ಪಕ್ಷಗಳಿಗೆ ನಿಧಿಯನ್ನು ನೀಡುವವರು ಕಪ್ಪುಹಣ ಬಳಕೆ ಮಾಡಬಾರದೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆ ಪ್ರಾರಂಭಿಸಿತ್ತು. 
ದಾನಿಗಳು ತಮ್ಮ ಗುರುತನ್ನು ತೋರಿಸಿಕೊಳ್ಳದೆ ಬ್ಯಾಂಕ್ ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಪಾವತಿ ಮಾಡಬಹುದಾದ ಅವಕಾಶ ಈ ಚುನಾವಣ ಬಾಂಡ್ ಗಳಲ್ಲಿ ಒದಗಿಸಲಾಗುತ್ತದೆ. ಅರ್ಹ ರಾಜಕೀಯ ಪಕ್ಷವು ಗೊತ್ತುಪಡಿಸಲಾದ ಬ್ಯಾಂಕ್ ಖಾತೆಯ ಮೂಲಕ ಸಂಗ್ರಹವಾದ ಹಣವನ್ನು ಪಡೆಯಲಿದೆ.
ಈ ವರ್ಷದ ಜನವರಿಯಲ್ಲಿ ಸರ್ಕಾರವು ಚುನಾವಣಾ ಬಾಂಡ್ ಪ್ರಾರಂಭಿಸುವ ಸೂಚನೆ ನೀಡಿತ್ತು. ಅದಾದ ಬಳಿಕ ಮಾ.1 ರಿಂದ ಮಾರ್ಚ್ 10ರವರೆಗೆ ಉದ್ದೇಶಿತ ಯೋಜನೆಗಳಡಿಯಲ್ಲಿ ಮೊದಲ ಹಂತದ ಬಾಡ್ ಗಳ ಹಂಚಿಕೆ ಮುಗಿದಿದೆ. 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಗದಿತ ಶಾಖೆಗಳಲ್ಲಿ ಮಾತ್ರ ಖರೀದಿಗೆ ಬಾಂಡ್ ಗಳು ದೊರೆಯುತ್ತದೆ. ಸ್ಟೇಟ್ ಬ್ಯಾಂ ಆಫ್ ಇಂಡಿಯಾ ಈ ಬಾಂಡ್ ಗಳ ವಿತರಣೆ ಮಾಡುವ ದೇಶದ ಏಕೈಕ ಬ್ಯಾಂಕ್ ಆಗಿದೆ.
SCROLL FOR NEXT