ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪದೇ ಪದೇ ಉದ್ಧಟತನ ಪ್ರದರ್ಶಿಸುತ್ತಿರುವ ಪಾಕಿಸ್ತಾನದ ವರ್ತನೆಗೆ ಭಾರತ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದು, ಪಾಕಿಸ್ತಾನ ರಾಯಭಾರಿಗೆ ಸೋಮವಾರ ಸಮನ್ಸ್ ಜಾರಿ ಮಾಡಿದೆ.
ಗಡಿಯಲ್ಲಿ ಪಾಕಿಸ್ತಾನ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಐವರು ನಾಗರೀಕರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನದ ದುರ್ವರ್ತನೆಗೆ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿರುವ ಭಾರತ, ಪಾಕಿಸ್ತಾನ ರಾಯಭಾರಿ ಸಯ್ಯದ್ ಹೈದರ್ ಶಾಹ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಇಂತಹ ಘೋರ ಕೃತ್ಯಗಳು ಮಾನವೀಯ ನಿಯಮಗಳಿಗೆ ಹಾಗೂ ವೃತ್ತಿಪರ ಸೇನೆಯ ವರ್ತನೆಗೆ ವಿರುದ್ಧವಾಗಿದೆ ಎಂದು ಸಮನ್ಸ್'ನಲ್ಲಿ ತಿಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಉದ್ದೇಶಪೂರ್ವಕವಾಗಿಯೇ ನಾಗರೀಕರನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಗಡಿ ನಿಯಂತ್ರಣ ರೇಖೆಯಿಂದ 2 ಕಿ.ಮೀ ದೂರದಲ್ಲಿದ್ದರೂ ನಾಗರೀಕರ ಮೇಲೆ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇಂತಹ ವರ್ತನೆಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಸಚಿವಾಲಯದ ತಿಳಿಸಿದೆ.
2018ರ ಮಾ.18 ರಂದು ಜಮ್ಮು ಮತ್ತು ಕಾಶ್ಮೀರದ ಭಿಂಬರ್ ಗಾಲಿ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನ, ಈ ವೇಳೆ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ದಂಪತಿಗಳು ಹಾಗೂ ಅವರ ಮೂವರು ಮಕ್ಕಳು ಸಾವನ್ನಪ್ಪಿದ್ದರು, ಅಲ್ಲದೆ ಇಬ್ಬರು ಅಪ್ರಾಪ್ತ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.