ನವದೆಹಲಿ: ಹಿರಿಯ ಸಂಶೋಧಕ ಹಾಗೂ ವಿಚಾರವಾದಿ ಡಾ. ಎಂಎಂ ಕಲಬುರ್ಗಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಗೆ ವಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಎನ್ ಐಎ ಅಥವಾ ಸಿಬಿಐ ತನಿಖೆ ಕೋರಿ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಈ ಪ್ರಕರಣ ಎನ್ಐಎ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಇಂದು ಅಫಿಡವಿಟ್ ಸಲ್ಲಿಸಿದೆ.
ರಾಷ್ಟ್ರೀಯ ಮತ್ತು ಅಂತರಾಜ್ಯ ಭಯೋತ್ಪಾದಕ ಪ್ರಕರಣಗಳನ್ನಷ್ಟೇ ಎನ್ಐಎ ಕೈಗೆತ್ತಿಕೊಳ್ಳುತ್ತದೆ. ಕೊಲೆ ಪ್ರಕರಣಗಳು ಈ ತನಿಖಾ ಸಂಸ್ಥೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಕೋರ್ಟ್ ಗೆ ತಿಳಿಸಿದ್ದಾರೆ.
ಇದೇ ವೇಳೆ ಈ ಕುರಿತು ಜುಲೈ ತಿಂಗಳಳೊಳಗೆ ಅಫಿಡವಿಟ್ ಸಲ್ಲಿಸುವಂತೆ ಸಿಬಿಐ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, 77 ವರ್ಷದ ಎಂಎಂ ಕಲುಬುರ್ಗಿ ಅವರನ್ನು ಆಗಸ್ಟ್ 30, 2015ರಲ್ಲಿ ಧಾರವಾಡದ ಕಲ್ಯಾಣನಗರದ ಅವರ ನಿವಾಸದಲ್ಲಿ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು, ಎಂಎಂ ಕಲಬುರ್ಗಿ ಹತ್ಯೆ ಪ್ರಕರಣವು ಎನ್ಐಎ ತನಿಖೆಯ ವ್ಯಾಪ್ತಿಗೆ ಬರುವುದಿಲ್ಲವೆಂಬ ಕೇಂದ್ರದ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎನ್ಐಎ ಪ್ರಕರಣಗಳನ್ನ ಕೈಗೆತ್ತಿಕೊಳ್ಳುವುದರಲ್ಲಿಯೂ ತಾರತಮ್ಯವಾಗುತ್ತಿದೆ. ರುದ್ರೇಶ್ ಪ್ರಕರಣವನ್ನು ಎನ್ಐಎ ವಹಿಸಿಕೊಂಡಿತು. ಅದರೆ, ಕಲಬುರ್ಗಿ ಪ್ರಕರಣ ಬೇಡ ಎನ್ನುತ್ತದೆ. ಮುಸ್ಲಿಮ್ ಉಗ್ರವಾದ, ಹಿಂದೂ ಉಗ್ರವಾದ ಎರಡೂ ಒಂದೇ ಅಲ್ಲವಾ? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos