ದೇಶ

ರಾಜ್ಯಸಭೆ ಚುನಾವಣೆ: ಕರ್ನಾಟದಲ್ಲಿ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಗೆಲುವು

Lingaraj Badiger
ಬೆಂಗಳೂರು/ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಸೇರಿ ಆರು ರಾಜ್ಯಗಳ ರಾಜ್ಯಸಭಾ ಚುನಾವಣೆಯ ಫಲಿತಾಂಶ ಶುಕ್ರವಾರ ಸಂಜೆ ಹೊರ ಬಿದ್ದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನ ಎಲ್ಲಾ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಇಂದು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ನ  ಎಲ್. ಹನುಮಂತಯ್ಯ, ನಾಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರು ಗೆಲುವು ಸಾಧಿಸಿದ್ದಾರೆ.
ಕರ್ನಾಟಕದ ನಾಲ್ಕು ಸ್ಥಾನಗಳಿಗೆ 5 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಿ.ಎಂ. ಫಾರೂಕ್ ಅವರು ಸೋಲು ಅನುಭವಿಸಿದ್ದಾರೆ.
ಇನ್ನು ತೆಲಂಗಾಣದಲ್ಲಿ ಟಿಆರ್ ಎಸ್ ನ ಎಲ್ಲಾ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಲ್ಕು ಸ್ಥಾನಗಳಲ್ಲಿ ಜಯ ಗಳಿಸಿದೆ.
ಉತ್ತರ ಪ್ರದೇಶದಲ್ಲಿ 10 ಸ್ಥಾನಗಳ ಪೈಕಿ ಬಿಜೆಪಿ ಒಂಬತ್ತು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸಮಾಜವಾದಿ ಪಕ್ಷದ ಏಕೈಕ ಅಭ್ಯರ್ಥಿ ಜಯಾ ಬಚ್ಚನ್ ಅವರು ಸಹ ಗೆಲುವು ಸಾಧಿಸಿದ್ದಾರೆ.
ಈಗಾಗಲೇ ಬಿಹಾರ ಮತ್ತು ಉತ್ತರ ಪ್ರದೇಶ ವಿಧಾನಸಭೆ ಉಪ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಗೆ ಹಾಲಿ ರಾಜ್ಯಸಭೆಯ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು, ಅತ್ತ ಕಾಂಗ್ರೆಸ್ ಪಕ್ಷಕ್ಕೆ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. 
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಜಾರ್ಖಂಡ್, ಛತ್ತೀಸ್ ಘಡ ಮತ್ತು ತೆಲಂಗಾಣ ಸೇರಿ ಒಟ್ಟು6 ರಾಜ್ಯಗಳ 26 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿತ್ತು.
SCROLL FOR NEXT