ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,400 ಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ವಜ್ರೋದ್ಯಮಿ ನೀರವ್ ಮೋದಿ ಗುಂಪಿನ ಫೈರ್ ಸ್ಟಾರ್ ಡೈಮೆಂಡ್ ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟ ನಡೆಸುವ ಆಯ್ಕೆಗಳನ್ನು ಪರಿಗಣಿಸಲಾಗುವುದು ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ(ಎನ್ಸಿಎಲ್ಟಿ) ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ ಇವರೊಂದಿಗೆ ಸಂಪರ್ಕ ಹೊಂದಿರುವ 60 ಇತರ ವಜ್ರಾಭರಣ ವ್ಯಾಪಾರಿಗಳು ಹಣ ವಾಪಸ್ ಪಡೆಯದಂತೆ, ವರ್ಗಾಯಿಸದಂತೆ ಹಾಗೂ ಸೊತ್ತುಗಳನ್ನು ಮಾರಾಟ ಮಾಡದಂತೆ ನಿರ್ಬಂಧ ಹೇರಿದ ಬೆನ್ನಲ್ಲೇ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.
ಗಂಭೀರ ಆರ್ಥಿಕ ಅಪರಾಧಗಳ ತನಿಖಾ ವಿಭಾಗ(ಎಸ್ಎಫ್ಐಒ) ಸೇರಿದಂತೆ ಬಹು ಸಂಸ್ಥೆಗಳು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ವಿರುದ್ಧ ಸುಮಾರು 11,300 ಕೋಟಿ ಅಕ್ರಮ ಹಣ ವ್ಯವಹಾರ ಮಾಡಿರುವ ಪ್ರಕರಣ ದಾಖಲಾಗಿದ್ದು ಪ್ರಸ್ತುತ ಉದ್ಯಮಿ ನೀರವ್ ಮೋದಿ ತಲೆಮರೆಸಿಕೊಂಡಿದ್ದಾರೆ.