ದೇಶ

ಅಧಿಕೃತ ಪ್ರಕಟಕ್ಕೂ ಮುನ್ನ ಚುನಾವಣಾ ದಿನಾಂಕ ಘೋಷಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ

Manjula VN
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡುವುದಕ್ಕೂ ಮುನ್ನ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಅವರು ಚುನಾವಣಾ ದಿನಾಂಕದ ಮಾಹಿತಿಗಳನ್ನು ಪ್ರಕಟ ಮಾಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. 
ಇಂದು ಬೆಳಿಗ್ಗೆ ದೆಹಲಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಓಂ ಪ್ರಕಾಶ್ ರಾವತ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆ 2018ರ ಚುನಾವಣೆಗೆ ಮೇ.12 ರಂದು ಮತದಾನ ನಡೆಯಲಿದ್ದು, ಮೇ.15 ರಂದು ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಿಸಿದ್ದರು, 
ಚುನಾವಣಾ ಆಯೋಗ ಪ್ರಕಟಿಸುವುದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಅವರು, ಕರ್ನಾಟಕ ರಾಜ್ಯದಲ್ಲಿ ಮೇ.12 ರಂದು ಮತದಾನ ನಡೆಯಲಿದ್ದು, ಮೇ.18 ರಂದು ಮತ ಎಣಿಕೆ ನಡೆಯಲಿದೆ ಎಂದು ಹೇಳಿಕೊಂಡಿದ್ದರು. 
ಸುದ್ದಿಗೋಷ್ಟಿಯಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸುತ್ತಿದ್ದ ಸಂದರ್ಭದಲ್ಲಿ ಸುದ್ದಿಗಾರರು ರಾವತ್ ಅವರನ್ನು ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಚುನಾವಣಾ ಆಯೋಗ ಘೋಷಣೆ ಮಾಡುವುದಕ್ಕೂ ಮುನ್ನ ಮಾಳ್ವಿಯಾ ಅವರು ಚುನಾವಣಾ ದಿನಾಂಕವನ್ನು ಹೇಗೆ ಪ್ರಕಟಿಸಿದರು ಎಂದು ಪ್ರಶ್ನೆ ಕೇಳಿದ್ದಾರೆ. 
ಇದಕ್ಕೆ ಉತ್ತರಿಸಿರುವ ರಾವತ್ ಅವರು, ಇದು ಅತ್ಯಂತ ಗಂಭೀರ ವಿಚಾರ. ತಪ್ಪುಗಳು ನಡೆದಿರುವುದು ಸಾಬೀತಾದರೆ, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ನಂತರ ಚುನಾವಣಾ ದಿನಾಂಕ ಪ್ರಕಟ ಕುರಿತಂತೆ ಮತ್ತೆ ತಮ್ಮ ಮಾತುಗಳನ್ನು ಮುಂದುವರೆಸಿದರು. 
ಮಾಳ್ವಿಯಾ ಅವರು ಟ್ವೀಟ್ ಮಾಡಿರುವಂತೆಯೇ ರಾಜ್ಯದಲ್ಲಿ ಮೇ.12 ರಂದು ಮತದಾನ ನಡೆಯಲಿದೆ. ಆದರೆ, ಮೇ.18 ಬದಲಿಗೆ ಮೇ.15ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
SCROLL FOR NEXT